ಜಿಲ್ಲೆ

ವೀರಭದ್ರ ದೇವರ ಜಯಂತ್ಯುತ್ಸವ

ಧಾರವಾಡ : ಶಿವ ಸಂಸ್ಕೃತಿಯ ಮೂಲಪುರುಷ ಶ್ರೀವೀರಭದ್ರ ದೇವರ ಜಯಂತಿ(ಉದ್ಭವ) ಮಹೋತ್ಸವವನ್ನು ಭಾದ್ರಪದ ಮಾಸದ ಮೊದಲ ಮಂಗಳವಾರ (ಸೆ. 19ರಂದು) ರಾಷ್ಟ್ರವ್ಯಾಪಿಯಾಗಿ ಏಕಕಾಲಕ್ಕೆ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವೀರಶೈವ-ಲಿಂಗಾಯತ ಸಂಘಟನಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿಗಳು ಜಂಟಿಯಾಗಿ ತಿಳಿಸಿವೆ.
5 ವರ್ಷಗಳಿಂದಲೂ ಶ್ರೀ ವೀರಭದ್ರದೇವರ ಜಯಂತಿ ಮಹೋತ್ಸವವನ್ನು ಅತ್ಯಂತ ವಿಶಿಷ್ಟವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದ್ದು, ಈ ವರ್ಷ ಸಹ ಮನೆ, ಗ್ರಾಮ, ನಗರ, ತಾಲೂಕು, ಜಿಲ್ಲೆ ಸೇರಿ ಎಲ್ಲೆಡೆ ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಷ್ಟೇ ಅಲ್ಲದೇ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಉತ್ತರಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ, ಇತರ ರಾಜ್ಯಗಳಲ್ಲೂ ದೇವರ ಜಯಂತಿ ಮಹೋತ್ಸವವನ್ನು ಆಚರಿಸುವಂತೆ ತಿಳಿಸಲಾಗಿದೆ.
ರಾಜ್ಯದಲ್ಲಿ ಶ್ರೀವೀರಭದ್ರ ದೇವರ ಜಯಂತಿ ಮಹೋತ್ಸವದ ದಿನ ವೀರಭದ್ರ ದೇವರ ದೇವಾಲಯಗಳಲ್ಲಿ ಏಕಾದಶ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಪುಷ್ಪಾಲಂಕಾರ, ಗುಗ್ಗಳ ಸೇವೆ ಸೇರಿ ವಿಶೇಷ ಪೂಜಾ ಕೈಂಕರ್ಯಗಳ ಜತೆಗೆ ದೇವಾಲಯಗಳ ಸೇವಾ ಸಮಿತಿಗಳು, ಟ್ರಸ್ಟ್‌ಗಳು ಪ್ರಾತಃಕಾಲದಲ್ಲಿ ವಿಶೇಷ ಗುಗ್ಗಳ, ಸಂಬಾಳ ವಾದ್ಯ ವೈಭವ ಹಾಗೂ ಮುನ್ನಾದಿನ ಅಹೋರಾತ್ರಿ ನಿರಂತರ ಭಜನಾ ಕಾರ್ಯಕ್ರಮ ಹಾಗೂ ಸಾಧ್ಯವಿರುವ ಕಡೆಗಳಲ್ಲಿ ದಾಸೋಹ ಸೇವೆ ಹಮ್ಮಿಕೊಳ್ಳುವಂತೆ ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿ ಅಧ್ಯಕ್ಷ ಸಿ.ಎಂ.ಶಿವಶರಣ ಕಲಬುರ್ಗಿ, ಉಪಾಧ್ಯಕ್ಷ ಡಾ.ಗುರುಮೂರ್ತಿ ಯರಗಂಬಳಿಮಠ, ಸಂಚಾಲಕರಾದ ಗಿರೀಶಕುಮಾರ ಬುಡರಕಟ್ಟಿಮಠ, ಪಿ.ಎಂ.ಚಿಕ್ಕಮಠ, ರಮೇಶ ಉಳ್ಳಾಗಡ್ಡಿ, ಪ್ರಕಾಶ ಅಂದಾನಿಮಠ ಇತರರು ಮನವಿ ಮಾಡಿದ್ದಾರೆ.