ವಿಜಯವಾಣಿ ಸುದ್ದಿಜಾಲ ಧಾರವಾಡ
ಸಿಡಿಲ ಮರಿ ಸ್ವಾಮಿ ವಿವೇಕಾನಂದ ಎಂದಾಕ್ಷಣ ಕೇಸರಿ ಬಟ್ಟೆ ತೊಟ್ಟು ಕೈ ಕಟ್ಟಿದ ವ್ಯಕ್ತಿಯ ಚಿತ್ರಣ ಕಣ್ಣೆದುರು ಬರುತ್ತದೆ. ಆದರೆ ಇದಕ್ಕೂ ಮೀರಿದ ಅಪರೂಪದ ಚಿತ್ರಗಳಿದ್ದರೂ ಅವು ಬೆಳಕಿಗೆ ಬಂದಿಲ್ಲ. ಅಂತಹ ಅಪರೂಪದ ಚಿತ್ರಗಳ ಜತೆಗೆ ಅವರ ಸಮಗ್ರ ಜೀವನ ಚರಿತ್ರೆಯನ್ನು ಯುವ ಜನತೆಗೆ ಪರಿಚಯಿಸುವ ಕೆಲಸ ಇಲ್ಲಿ ನಡೆದಿದೆ.
ನಗರದಲ್ಲಿ ಏರ್ಪಡಿಸಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವ ನಿಮಿತ್ತ ಇಲ್ಲಿನ ಸೃಜನಾ ರಂಗ ಮಂದಿರ ಬಳಿಯ ಕೆಸಿಡಿ ನೂತನ ಗ್ರಂಥಾಲಯದಲ್ಲಿ ಸ್ಥಾಪಿಸಿರುವ ಮಳಿಗೆಯ ವಿಶೇಷ ಇದಾಗಿದೆ.
ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಸರ್ಕಾರಗಳು ವಿವಿಧ ಸಂಘಗಳ ಸಹಯೋಗದಲ್ಲಿ ಯುವ ಜನೋತ್ಸವ ಆಚರಿಸುತ್ತಿವೆ. ಆದರೆ ಯುವ ಜನೋತ್ಸವ ಪ್ರಚಾರಕ್ಕೆ ಅಳವಡಿಸಿರುವ ಬ್ಯಾನರ್ ಸೇರಿ ಎಲ್ಲಿಯೂ ವಿವೇಕಾನಂದರ ಭಾವಚಿತ್ರ ಕಾಣುತ್ತಿಲ್ಲ. ಅವರ ಬಗ್ಗೆ ಉಪನ್ಯಾಸವೂ ಇಲ್ಲವಾಗಿದೆ. ಇಂತಹ ಸಮಯದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಇಲಾಖೆ ಸ್ವಾಮಿ ವಿವೇಕಾನಂದರ ಸಮಗ್ರ ಜೀವನವನ್ನು ಯುವಕರಿಗೆ ತಿಳಿಸುವ ಪ್ರಯತ್ನ ಮಾಡಿ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದೆ.
ವಿವಿಧ ರಾಜ್ಯಗಳ ಪ್ರತಿನಿಧಿಗಳು ಸೇರಿ ಸಾರ್ವಜನಿಕರಿಗೆ ವಿವೇಕಾನಂದರ ಭಾಷಣ ಸೇರಿ ಸಮಗ್ರ ಜೀವನ ತಿಳಿಸುವ ಮಾಹಿತಿ ಅಳವಡಿಸಿದೆ. ಈ ಮಳಿಗೆ ಎಲ್ಲರ ಗಮನ ಸೆಳೆದಿದ್ದು, ಯುವಕರನ್ನು ಕೈ ಬೀಸಿ ಕರೆಯುತ್ತಿದೆ. ಒಂದು ರೂಪಾಯಿ ಇಲ್ಲದಿದ್ದರೂ ಮನುಷ್ಯ ಬಡವನಲ್ಲ. ಆದರೆ, ಕನಸು ಮತ್ತು ಮಹತ್ವಾಕಾಂಕ್ಷೆ ಇಲ್ಲದ ಮನುಷ್ಯ ನಿಜವಾದ ಬಡವ, ಎಳಿ ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ.. ಹೀಗೆ ಸ್ವಾಮಿ ವಿವೇಕಾನಂದರ ನೂರಾರು ಸ್ಫೂರ್ತಿದಾಯಕ ಘೋಷಣೆಗಳು ಇಲ್ಲಿ ಕಾಣ ಸಿಗಲಿವೆ.
ಮಳಿಗೆಯಲ್ಲಿ ಸ್ವಾಮಿ ವಿವೇಕಾನಂದರ ಜನನ, ಶಿಕ್ಷಣ, ಯುವಕರಿಗೆ ಮಾದರಿಯಾದ ಬಗೆ, ವಿದೇಶ ಪ್ರಯಾಣ, ಇಡೀ ದೇಶವೇ ವೀರಸನ್ಯಾಸಿಯನ್ನು ನೆನಪಿಡುವಂತೆ ಮಾಡಿದ 1893ರ ಚಿಕಾಗೋ ಭಾಷಣ, ಅಪರೂಪದ ಚಿತ್ರಗಳು.. ಹೀಗೆ ವಿವೇಕಾನಂದರ ಇಡೀ ಜೀವನ ಚರಿತ್ರೆಯನ್ನೇ ತೆರದಿಟ್ಟು ಯುವ ಜನತೆಗೆ ಇನ್ನಷ್ಟು ಅವರ ಬಗ್ಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ.
ಸ್ಥಳೀಯ ಜನರಿಗೆ ಮಾತ್ರವಲ್ಲದೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ಜನರಿಗೆ ಸಹ ಎಲ್ಲ ಮಾಹಿತಿ ಸರಿಯಾಗಿ ಮುಟ್ಟಲಿ ಎಂಬ ಕಾರಣಕ್ಕೆ ಕನ್ನಡದ ಜತೆಗೆ ಆಂಗ್ಲ ಭಾಷೆಯಲ್ಲಿ ಸಹ ಮಾಹಿತಿ ಅಳವಡಿಸಿದ್ದಾರೆ. ಮೂರು ದಿನಗಳಿಂದ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸ್ಥಳೀಯರು ಮಳಿಗೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ವಿವೇಕಾನಂದ ಜೀವನ ಚರಿತ್ರೆ ಜತೆಗೆ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿ ಅನೇಕ ಮಹಾತ್ಮರ ಹಾಗೂ ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ಕುರಿ ಮಾಹಿತಿಗಳನ್ನೂ ಇಲ್ಲಿ ಅಳವಡಿಸಲಾಗಿದೆ.