ಜಿಲ್ಲೆ

ವೀರ ರಾಣಿ ಚನ್ನಮ್ಮಳ ಆದರ್ಶ ಅನುಕರಣೀಯ

ಚಿತ್ರದುರ್ಗ: ಕಿತ್ತೂರು ರಾಣಿ ಚನ್ನಮ್ಮ ಹಾಕಿಕೊಟ್ಟಿರುವ ಸ್ವಾಭಿಮಾನದ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ಡಿಸಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಸಮಾರಂಭದಲ್ಲಿ ಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕಿತ್ತೂರು ರಾಣಿ ಚನ್ನಮ್ಮ ಅವರ ಸಂದೇಶವನ್ನು ಎಲ್ಲರೂ ಪಾಲಿಸಬೇಕಿದೆ. ಸ್ವರಾಜ್ಯ, ಸ್ವಾತಂತ್ರ್ಯ ಇನ್ನೊಬ್ಬರ ಅಡಿಯಾಗಬಾರದು ಎಂದು ನಂಬಿದ್ದ ಚನ್ನಮ್ಮ ತನ್ನ ಪ್ರಜೆಗಳ ಹಿತ ಕಾಯುವ ಸಂಕಲ್ಪ ತೊಟ್ಟಿದ್ದರು. ಮಕ್ಕಳಲ್ಲಿ ಸ್ವಾಭಿಮಾನ, ಹೋರಾಟದ ಕಿಚ್ಚು ಬೆಳೆಸೋಣ. ಸ್ವಾರ್ಥ ಮನೋಭಾವದಿಂದಾಗಿ ಜಗತ್ತು ಇಂದು ವಿನಾಶದ ಅಂಚಿಗೆ ಹೋಗುತ್ತಿದೆ. ಮಹನೀಯರನ್ನು ಯಾವುದೇ ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಎಲ್ಲ ಮಹನೀಯರ ಸಂದೇಶಗಳನ್ನೂ ಮುಂದಿನ ಪೀಳಿಗೆಗೆ ತಲುಪಿಸೋಣ ಎಂದರು.
ನಿವೃತ್ತ ಉಪನ್ಯಾಸಕಿ ಸಿ.ಬಿ.ಶೈಲಾ ಜಯಕುಮಾರ್ ಮಾತನಾಡಿ, ಭಾರತದಾದ್ಯಂತ ಪ್ರಥಮವಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾ ಡಿದ ಮಹಿಳೆ ಚನ್ನಮ್ಮ. ಸ್ವಾಭಿಮಾನ, ಸ್ವರಾಜ್ಯಕ್ಕಾಗಿ ಆತ್ಮವಿಶ್ವಾಸದಿಂದ ಹೋರಾಡಿದ ವೀರ ಮಹಿಳೆಯನ್ನು ಪ್ರೀತಿ,ಗೌರವದಿಂದ ಸ್ಮರಿಸೋಣ. ಚನ್ನಮ್ಮಾಜಿ ನಮ್ಮೆಲ್ಲರ ಬದುಕಿಗೆ ಸ್ಫೂರ್ತಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್,ಸಮಾಜದ ಮುಖಂಡರಾದ ಮಹಡಿಶಿವಮೂರ್ತಿ,ಎನ್.ಬಿ.ವಿಶ್ವನಾಥ್,ಜಿ.ಎನ್.ಮಹೇಶ್,ಮೋಕ್ಷಾ ರುದ್ರಸ್ವಾಮಿ, ನಿರ್ಮಲಾಬಸವರಾಜ್,ರೀನಾವೀರಭದ್ರಪ್ಪ, ಸುಮಾ ರಾಜಶೇಖರ್, ಪರಮೇಶ್ವರ್, ಶಿವಪ್ರಕಾಶ್, ದಯಾನಂದ ಪಾಟೀಲ್, ಜಿಪಂ ಮಾಜಿ ಸದಸ್ಯ ಪಾಪಯ್ಯ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಇತರರು ಇದ್ದರು. ತೋಟಪ್ಪ ಉತ್ತಂಗಿ ಸಂಗಡಿಗರು ಗೀತಗಾಯನ ನಡೆಸಿಕೊಟ್ಟರು.