ಜಿಲ್ಲೆ

ವೀರ ಮಹಿಳೆಯರ ಜೀವನ ಚರಿತ್ರೆಯನ್ನು ಪಠ್ಯಕ್ಕೆ ಸೇರಿಸಿ

ಮೈಸೂರು: ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆಯರ ವಿಚಾರ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳ್ಳಬೇಕಾಗಿದೆ ಎಂದು ಕರಾಮುವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ.ಸೆಲ್ವ ಪಿಳ್ಳೆ ಅಯ್ಯಂಗಾರ್ ಹೇಳಿದರು.

ಭಾರತೀಯ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘದಿಂದ ನಗರದ ಬಿಜಿಎಸ್ ಬಿ.ಇಡಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಣಿ ಅಬ್ಬಕ್ಕ, ಅಹಲ್ಯಾಬಾಯಿ ಹೋಳ್ಕರ್ ಮತ್ತು ಕಿತ್ತೂರು ರಾಣಿ ಚನ್ನಮ್ಮ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ವೀರ ಮಹಿಳೆಯರ ಸಾಹಸಗಾಥೆಗಳು ನಮ್ಮ ಮಕ್ಕಳ ಮನಸ್ಸಿನಲ್ಲಿ ನೆಲೆಗೊಳ್ಳಬೇಕು.ಅದಕ್ಕಾಗಿ ಈ ವಿಚಾರಗಳು ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳ್ಳಬೇಕು ಎಂದರು.

ರಾಣಿ ಅಬ್ಬಕ್ಕ ದೇವಿಗೆ ಅಭಯರಾಣಿ ಎಂಬ ಹೆಸರೂ ಇತ್ತು. ಆಕೆ ಮೂರು ವರ್ಷಗಳ ಕಾಲ ಪೋರ್ಚುಗೀಸರ ವಿರುದ್ಧ ನಿರಂತರ ಹೋರಾಡಿದಳು. ಅಹಲ್ಯಾಬಾಯಿ ಹೋಳ್ಕರ್ 14 ಕೋಟಿ ರೂ. ರಾಜಧನವನ್ನು ಜನಕಲ್ಯಾಣಕ್ಕಾಗಿ ವಿನಿಯೋಗಿಸಿದರು. ಇಂದಿನ ಮಠಗಳು ಆ ರೀತಿಯ ಜನ ಕಲ್ಯಾಣ ಕಾರ್ಯ ಮಾಡುತ್ತಿವೆ.

ಅಹಲ್ಯಾಬಾಯಿ ಗಂಡ ಖಂಡೇರಾವ್ ವೀರ ಮರಣ ಹೊಂದಿದಾಗ ರಾಜಾಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿದ್ದರು ಎಂದು ಸ್ಮರಿಸಿದರು.

ಕಿತ್ತೂರುರಾಣಿ ಚನ್ನಮ್ಮ ಸ್ವಾತಂತ್ರೃ ಹೋರಾಟದ ಧ್ರುವತಾರೆ. ಮೊದಲ ಬಾರಿಗೆ ಬ್ರಿಟಿಷ್ ಸೇನೆಯನ್ನು ಸೋಲಿಸಿ ಜೈಲಿಗೆ ದೂಡಿದ ಕೀರ್ತಿ ಚನ್ನಮ್ಮಳಿಗೆ ಸಲ್ಲುತ್ತದೆ ಎಂದರು.

ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಅಸ್ಮಿತೆಯನ್ನು ಕಾಪಾಡಿದ ಮೂವರು ವೀರ ಮಹಿಳೆಯರು ಎಂದರು.

ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಎ.ಪಿ.ಜ್ಞಾನಪ್ರಕಾಶ್ ಮಾತನಾಡಿ, ನಮ್ಮನ್ನು ಆಳಿ ಅಳಿದು ಇತಿಹಾಸ ಪುಟ ಸೇರಿ ಹೋಗಿರುವ ವೀರ ಮಹಿಳೆಯರ ಸಾಹಸ, ತ್ಯಾಗ ಮತ್ತು ಬಲಿದಾನದ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾಲೇಜಿನ ಆಡಳಿತ ಅಧಿಕಾರಿ ಎಚ್.ಯಶೋದಾ, ಪ್ರಾಂಶುಪಾಲ ಡಾ.ನಾಗರಾಜು ಇನ್ನಿತರರಿದ್ದರು.