ಗದಗ: ರಾಜ್ಯದಲ್ಲಿ ಮತ್ತೊಮ್ಮೆ ವ್ಯಾಪಕವಾಗಿ ಆವರಿಸುತ್ತಿರುವ ಕರೊನಾ ವೈರಸ್ ತಡೆಗಟ್ಟಲು ಸರ್ಕಾರ ಘೋಷಿಸಿರುವ ವಾರಾಂತ್ಯದ ಕರ್ಫ್ಯೂಗೆ ಶನಿವಾರ ಗದಗ ಬೆಟಗೇರಿ ಅವಳಿ-ನಗರ ಸೇರಿ ಇಡೀ ಜಿಲ್ಲೆ ಸ್ತಬ್ಧಗೊಂಡಿತು.
ಜಿಲ್ಲಾದ್ಯಂತ ಮಾಸ್ಕ್ ಧರಿಸದವರಿಗೆ ಪೊಲೀಸರು ದಂಡ ವಿಧಿಸಿದರು. ಕರ್ಫ್ಯೂ ಮಧ್ಯೆಯೂ ಅನಗತ್ಯವಾಗಿ ಸುತ್ತಾಡುವ ಬೈಕ್ ಸವಾರರಿಗೆ ಪಾಠ ಕಲಿಸಿದ ಪೊಲೀಸರು ಬೈಕ್ಗಳನ್ನು ಸೀಜ್ ಮಾಡಿದರು. ಗದಗ ನಗರದಲ್ಲಿ ವಕೀಲರೊಬ್ಬರು ಪೊಲೀಸರೊಂದಿಗೆ ವಾಗ್ವಾದ ಮಾಡಿದ ಘಟನೆ ನಡೆಯಿತು.
ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಹೇರಲಾಗಿದ್ದು, ಶುಕ್ರವಾರ ರಾತ್ರಿಯಿಂದಲೇ ಪೊಲೀಸರು ವಾಹನದಲ್ಲಿ ಸಂಚರಿಸಿ ಜನರಿಗೆ ತಿಳಿವಳಿಕೆ ನೀಡಿದರು. ಹೀಗಾಗಿ, ಶನಿವಾರ ಬಹುತೇಕ ಜನರು ಮನೆಯಿಂದ ಹೊರಗೆ ಬರಲಿಲ್ಲ. ಆದರೆ, ಬೆಳಗ್ಗೆ 6ರಿಂದ ಬೆಳಗ್ಗೆ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಪೊಲೀಸರು ಇದ್ಯಾವುದಕ್ಕೂ ಅವಕಾಶ ನೀಡಲಿಲ್ಲ. ಭಯದಿಂದ ಬಹುತೇಕ ವ್ಯಾಪಾರಸ್ಥರು ಅಂಗಡಿ ತೆರೆಯಲು ಮುಂದಾಗಲಿಲ್ಲ. ಇದರಿಂದ ಜನಸಾಮಾನ್ಯರು ಕೊಂಚ ಸಮಸ್ಯೆ ಎದುರಿಸುವಂತಾಯಿತು.
ಗದಗ-ಬೆಟಗೇರಿ ನಗರದ ಪ್ರಮುಖ ಜನನಿಬಿಡ ಪ್ರದೇಶಗಳು ಎನಿಸಿದ ಸ್ಟೇಷನ್ ರಸ್ತೆ, ನಾಮಜೋಶಿ ರಸ್ತೆ, ಬ್ಯಾಂಕ್ ರಸ್ತೆ, ಮುಳಗುಂದ ನಾಕಾ, ಹಾಲಗೇರಿ ನಾಕಾ, ಬೆಟಗೇರಿ ಟೆಂಗಿನಕಾಯಿ ಬಜಾರ್, ಹೆಲ್ತ್ಕ್ಯಾಂಪ್, ಹಳೇ ಡಿಸಿ ಕಚೇರಿ ಪ್ರದೇಶಗಳು ಜನರಿಲ್ಲದೆ ಭಣಗುಟ್ಟಿದವು. ಬಸ್ ಸಂಚಾರ ಮತ್ತು ರೈಲ್ವೆ ಸಂಚಾರ ಸ್ಥಗಿತಗೊಳಿಸಿದ್ದರಿಂದ ಬಸ್ ಮತ್ತು ರೈಲು ನಿಲ್ದಾಣಗಳು ಖಾಲಿ ಖಾಲಿಯಾಗಿದ್ದವು.
ಅಂಗವಿಕಲ ಯುವತಿಯ ಪರದಾಟ
ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರೈಲಿನ ಮೂಲಕ ಗದಗ ನಗರಕ್ಕೆ ಆಗಮಿಸಿದ್ದ ಅಂಗವಿಕಲ ಯುವತಿಯೊಬ್ಬರು ಬಸ್ ಸಂಚಾರ ಇಲ್ಲದೆ ಪರದಾಡಿದರು. ಯುವತಿಯು ನವಲಗುಂದ ತಾಲೂಕಿನ ಶಲವಡಿ ಗ್ರಾಮಕ್ಕೆ ತೆರಳಬೇಕಿತ್ತು. ಆದರೆ, ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ಬಸ್ ಇದ್ದರೂ ಪ್ರಯಾಣಿಕರು ಇಲ್ಲದ್ದರಿಂದ ಬಸ್ ಸಂಚಾರ ಆರಂಭಿಸಲಿಲ್ಲ್ಲ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾದು ನಂತರ ಗ್ರಾಮೀಣ ಭಾಗದ ಬಸ್ವೊಂದರ ಮೂಲಕ ಅವರು ತಮ್ಮೂರಿಗೆ ತೆರಳಿದರು. ಕರ್ಫ್ಯೂ ಇರುವುದರಿಂದ ಜನರ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಬಸ್ ಸಂಚಾರ ಆರಂಭಿಸಲಿಲ್ಲ. ಮುಂಡರಗಿ, ಗಜೇಂದ್ರಗಡ, ಹುಬ್ಬಳ್ಳಿ ರೂಟ್ಗಳಲ್ಲಿ ಮಾತ್ರ ಒಂದೆರಡು ಬಸ್ ಸಂಚರಿಸಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ವಿವರಿಸಿದರು.
ಹೊಳೆಆಲೂರಲ್ಲಿ ಬಿಕೋ ಎನ್ನುತ್ತಿದ್ದ ರಸ್ತೆ
ಹೊಳೆಆಲೂರ: ಕರೊನಾ 2ನೇ ಅಲೆ ಅಪಾಯ ತಡೆಯಲು ಸರ್ಕಾರ ಜಾರಿಗೊಳಿಸಿದ ವೀಕೆಂಡ್ ಕರ್ಫ್ಯೂಗೆ ಗ್ರಾಮ ಸೇರಿದಂತೆ ಈ ಭಾಗದ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು.
ಗ್ರಾಮದ ಎಪಿಎಂಸಿ ವರ್ತಕರು, ಕಿರಾಣಿ ವರ್ತಕರು, ಹಣ್ಣು, ತರಕಾರಿ ಮಾರಾಟಗಾರರು ಪೊಲೀಸರು ಹಾಗೂ ಅರೋಗ್ಯ ಇಲಾಖೆಯರು ಮತ್ತು ಗ್ರಾಪಂ ಸಿಬ್ಬಂದಿ ಆಗಮಿಸುವ ಮೊದಲೇ ಸ್ವಯಂಪ್ರೇರಣೆಯಿಂದ ತಮ್ಮ ಅಂಗಡಿ ಬಂದ್ ಮಾಡಿ ಬೆಂಬಲ ಸೂಚಿಸಿದರು. ಜನರು ಅನಗತ್ಯವಾಗಿ ಹೊರಗೆ ಓಡಾಡುವುದು ಕಂಡು ಬರಲಿಲ್ಲ. ಬಾರ್ಗಳು ಬಂದ್ ಆಗಿದ್ದರಿಂದ ಮದ್ಯ ಪ್ರಿಯರು ಪರದಾಡಿದ ದೃಶ್ಯ ಕಂಡುಬಂದಿತು. ಗ್ರಾಮದ ರಾಣಿ ಚನ್ನಮ್ಮ ವೃತ್ತ, ಆಲೂರ ವೆಂಕಟರಾವ್ ವೃತ್ತ, ರೈಲ್ವೇ ಸ್ಟೇಶನ ರಸ್ತೆ, ಮುಖ್ಯ ಬಜಾರ, ಗಾಂಧಿ ನಗರ, ಬಸವವೇಶ್ವರ ರೈತ ಕಟ್ಟೆ, ದುರ್ಗದ ಬೈಲ್, ಗಾಡಗೋಳಿ ರಸ್ತೆ ಬಿಕೋ ಎನ್ನುತ್ತಿದ್ದವು. ಮಾಸ್ಕ್ ಇಲ್ಲದೆ ಓಡಾಡುತ್ತಿದ್ದವರಿಗೆ ಪೊಲೀಸರು ಬೆತ್ತದ ರುಚಿ ಮುಟ್ಟಿಸಿದರು.
ವ್ಯಾಪಾರ-ವಹಿವಾಟು ಬಂದ್
ನರಗುಂದ: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಎಲ್ಲ ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್ ಮಾಡಲಾಗಿದೆ. ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಸೋಂಕು ತಡೆಗಟ್ಟಲು ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವ್ಯಾಪಾರ-ವಹಿವಾಟನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ತಾಲೂಕಿನ ರೈತರು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತಮ್ಮ ಯಾವುದೇ ಉತ್ಪನ್ನಗಳನ್ನು ಮಾರಾಟಕ್ಕೆ ತರಬಾರದು ಎಂದು ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಣಗುಟ್ಟಿದ ಬಸ್ ನಿಲ್ದಾಣ
ಡಂಬಳ: ಕರೊನಾ ತಡೆಗಟ್ಟಲು ಸರ್ಕಾರ ಶನಿವಾರ ಮತ್ತು ಭಾನುವಾರ ಘೊಷಿಸಿದ ವೀಕೆಂಡ್ ಲಾಕ್ಡೌನ್ಗೆ ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಡಂಬಳ ಗ್ರಾಮದ ಎಲ್ಲ ಹೋಟೆಲ್, ದಿನಸಿ ಅಂಗಡಿಗಳನ್ನು ಮಾಲೀಕರು ಬೆಳಗ್ಗೆ 10 ಗಂಟೆಗೆ ಸ್ವಯಂಪ್ರೇರಣೆಯಿಂದ ಬಂದ್ ಮಾಡಿದರು. ನಿತ್ಯ ನೂರಾರು ಪ್ರಯಾಣಿಕರು, ಜನಜಂಗುಳಿ ಇರುತ್ತಿದ್ದ ಡಂಬಳ ಬಸ್ ನಿಲ್ದಾಣ ಶನಿವಾರ ಭಣಗುಡುತ್ತಿತ್ತು. ರಸ್ತೆಗಳು ಸಾರ್ವಜನಿಕರ ಸಂಚಾರವಿಲ್ಲದ್ದರಿಂದ ಬಿಕೋ ಎನ್ನುತ್ತಿದ್ದವು. ಗ್ರಾಮೀಣ ಪ್ರದೇಶಗಳಲ್ಲಿ ರೈತರು, ಕೂಲಿ ಕಾರ್ವಿುಕರು, ಜನರು ಮಾಸ್ಕ್ ಧರಿಸಿ ದಿನನಿತ್ಯದ ಕೃಷಿ ಚಟುವಟಿಕೆ, ಮತ್ತಿತರ ಕಾರ್ಯಗಳಲ್ಲಿ ತೊಡಗಿದ್ದು ಕಂಡುಬಂತು. ಡಂಬಳ ಗ್ರಾಮದ ಹೊರ ಪೊಲೀಸ್ ಠಾಣೆ ಸಿಬ್ಬಂದಿ ಜನರಿಗೆ ಮಾಸ್ಕ್ ಧರಿಸುವಂತೆ, ಪರಸ್ಪರ ಅಂತರ ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದರು.
ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ
ನರೇಗಲ್ಲ: ಕರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಘೊಷಿಸಿದ ವೀಕೆಂಡ್ ಲಾಕ್ಡೌನ್ಗೆ ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶನಿವಾರ ಬೆಳಗ್ಗೆ 6ರಿಂದ ಬೆಳಗ್ಗೆ 10ರವರೆಗೆ ಹಾಲು, ಹಣ್ಣು, ತರಕಾರಿ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ನಂತರ ಪಪಂ, ಪೊಲೀಸ್ ಸಿಬ್ಬಂದಿ ಅಂಗಡಿಗಳನ್ನು ಬಂದ್ ಮಾಡಿಸಿದರು. ಪ್ರಮುಖ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಅನವಶ್ಯಕವಾಗಿ ತಿರುಗಾಡುತ್ತಿ್ತ್ದ 10ಕ್ಕೂ ಅಧಿಕ ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡರು. ನರೇಗಲ್ಲ ಬಸ್ ನಿಲ್ದಾಣ ಹತ್ತಿರ ಪಿಎಸ್ಐ ರಾಘವೇಂದ್ರ ಎಸ್., ಸಿಬ್ಬಂದಿ ಅನವಶ್ಯಕವಾಗಿ ಓಡಾಡುತ್ತಿದ್ದವರಿಗೆ ತಿಳಿಹೇಳಿ, ಮಾಸ್ಕ್ ಧರಿಸದವರಿಗೆ ದಂಡ ಹಾಕಿ ಎಚ್ಚರಿಕೆ ನೀಡಿದರು. ಕೋಡಿಕೊಪ್ಪ, ಕೋಚಲಾಪುರ, ತೋಟಗಂಟಿ, ಮಲ್ಲಾಪುರ, ದ್ಯಾಂಪುರ, ಬೂದಿಹಾಳ, ಜಕ್ಕಲಿ, ಮಾರನಬಸರಿ, ಹಾಲಕೆರೆ, ನಿಡಗುಂದಿಕೊಪ್ಪ, ನಿಡಗುಂದಿ, ಕಳಕಾಪುರ, ಯರೇಬೇಲೇರಿ, ಡ.ಸ. ಹಡಗಲಿ, ಕುರಡಗಿ, ಗುಜಮಾಗಡಿ ಸೇರಿದಂತೆ ನರೇಗಲ್ಲ ಹೋಬಳಿಯ ಎಲ್ಲ ಗ್ರಾಮಗಳು ಸಂಪೂರ್ಣ ಸ್ತಬ್ಧವಾಗಿದ್ದವು.
ಅಗತ್ಯ ಸೇವೆ ಬಿಟ್ಟು ಉಳಿದೆಲ್ಲವೂ ಸ್ಥಗಿತ
ರೋಣ: ಕೋವಿಡ್-19 ನಿಯಂತ್ರಣ ಮಾರ್ಗಸೂಚಿ ನಿಯಮಗಳನ್ನು ಪಟ್ಟಣದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಶನಿವಾರ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಚಟುವಟಿಕೆ ಸ್ಥಗಿತಗೊಂಡಿದ್ದವು.
ಜನರ ಓಡಾಟ ನಿರ್ಬಂಧಿಸಲಾಗಿತ್ತು. ಆದರೆ, ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಇನ್ನು ಖಾಸಗಿ ವಾಹನಗಳ ಮಾಲೀಕರು ಸ್ವಯಪ್ರೇರಿತವಾಗಿ ವಾಹನಗಳ ಸಂಚಾರ ನಿಲ್ಲಿಸಿದ್ದರು. ಕೆಎಸ್ಆರ್ಟಿಸಿ ಬಸ್ ಸಂಚಾರ ಇದ್ದರೂ, ಪ್ರಯಾಣಿಕರು ಬಸ್ ನಿಲ್ದಾಣದತ್ತ ಸುಳಿಯಲಿಲ್ಲ.
ನರಗುಂದದಲ್ಲಿ ಮಾಸ್ಕ್ ಧರಿಸದವರಿಗೆ ದಂಡ
ನರಗುಂದ: ವಾರಾಂತ್ಯದ ಕರ್ಫ್ಯೂ ಜಾರಿ ಹಿನ್ನೆಲೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಪೊಲೀಸರು ಶನಿವಾರ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಇದರಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹಾಗೂ ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿತ್ತಾದರೂ ಪೊಲೀಸರ ಭಯಕ್ಕೆ ಅಷ್ಟೊಂದು ಪ್ರಮಾಣದ ಜನರು ಮನೆಯಿಂದ ಹೊರಗಡೆ ಬರಲಿಲ್ಲ. ಕೆಎಸ್ಆರ್ಟಿಸಿ ಬಸ್ಗಳು, ಆಟೋ ಚಾಲಕರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಪ್ರಯಾಣಿಕರಿಲ್ಲದೆ ಕೆಲವೊಂದು ಬಸ್ಗಳಲ್ಲಿ ಬೆರಳೆಣಿಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿರುವುದು ಕಂಡು ಬಂತು.
ಪಟ್ಟಣದ ಶಿವಾಜಿ ವರ್ತಲ, ಪುಟ್ಟರಾಜ ಗವಾಯಿಗಳ ವರ್ತಲ, ನೀರಾವರಿ ಕಾಲನಿ, ಆಯಿಲ್ ಮಿಲ್ ಸರ್ಕಲ್ನಲ್ಲಿ ಪೊಲೀಸರು ನಾಕಾಬಂದಿ ಹಾಕಿದ್ದರು. ವಿನಾಕಾರಣ ಮನೆಯಿಂದ ಹೊರಗಡೆ ಬಂದವರಿಗೆ ಹಾಗೂ ಮಾಸ್ಕ್ ಧರಿಸದವರಿಗೆ ಬೆತ್ತದ ರುಚಿ ತೋರಿಸಿ ದಂಡ ವಿಧಿಸಿದರು. ದಾಖಲಾತಿಗಳಿಲ್ಲದೆ ಕರೊನಾ ನಿಯಮ ಉಲ್ಲಂಘಿಸಿರುವ 5 ಬೈಕ್ಗಳನ್ನು ಸೀಜ್ ಮಾಡಿದರು. ಪಟ್ಟಣದ ವಿವಿಧ ಬಡಾವಣೆಗಳ ದೇವಸ್ಥಾನದ ಕಟ್ಟೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಗುಂಪಾಗಿ ಕುಳಿತಿದ್ದ ಜನರನ್ನು ಚದುರಿಸುವ ಮೂಲಕ ಅವರಿಗೂ ಲಾಠಿ ರುಚಿ ಮುಟ್ಟಿಸಿದರು. ಬಿರು ಬಿಸಿಲಿನಿಂದ ಕೂಡಿದ್ದ ತಾಲೂಕಿನಾದ್ಯಂತ ಸಂಜೆ 5 ಗಂಟೆಯಿಂದ 67 ಗಂಟೆವರೆಗೆ ಮಳೆ ಸುರಿದು ಇಳೆಯನ್ನು ತಂಪಾಗಿಸಿತು.