ಜಿಲ್ಲೆ

ವೀಕೆಂಡ್ ಕರ್ಫ್ಯೂ ಮನೆಯಲ್ಲೇ ಸಂಕ್ರಾಂತಿ

Ramanagara

ರಾಮನಗರ: ಕರೊನಾಂತಕ ಮತ್ತು ವೀಕೆಂಡ್ ಕರ್ಫ್ಯೂ ನಡುವೆಯೇ ಸುಗ್ಗಿ ಹಬ್ಬ ಸಂಕ್ರಾಂತಿ ಆಚರಣೆಗೆ ಜಿಲ್ಲೆ ಸಜ್ಜುಗೊಂಡಿದೆ.

ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಮಾರುಕಟ್ಟೆಗಳು ಬಂದ್ ಆಗುವ ಹಿನ್ನೆಲೆಯಲ್ಲಿ ಶುಕ್ರವಾರವೇ ರಾಮನಗರ ಸೇರಿ ಜಿಲ್ಲೆಯಲ್ಲಿ ಬಹುತೇಕ ಮಾರುಕಟ್ಟೆಗಳು ಜನರಿಂದ ಗಿಜಿಗುಡುತ್ತಿದ್ದವು. ಬೆಲೆ ಏರಿಕೆ ಬಿಸಿಯ ನಡುವೆ ಚೌಕಾಸಿ ವ್ಯಾಪಾರವೂ ನಡೆದಿತ್ತು.

ಏರಿದ ಬೆಲೆ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಎಳ್ಳು ಬೆಳ್ಳದ ಬೆಲೆ ಗ್ರಾಹಕರ ಜೇಬಿಗೆ ಭಾರವಾಗಿತ್ತು. ಬಿಳಿ ಎಳ್ಳು ಕೆ.ಜಿ.ಗೆ 100 ರೂ.ವರೆಗೆ ಮಾರಾಟವಾಗುತ್ತಿದ್ದರೆ, ಬೆಲ್ಲ 80ರಿಂದ 140ರ ಆಸುಪಾಸಿನಲ್ಲಿತ್ತು. ಇನ್ನು ರೆಡಿಮೇಡ್ ಎಳ್ಳು-ಬೆಲ್ಲ ಕೆಜಿಗೆ 150ರಿಂದ 250 ರೂ.ವರೆಗೆ ಮಾರಾಟವಾಗುತ್ತಿತ್ತು.

ಜೋಡಿ ಕಬ್ಬು ಜಲ್ಲೆಗೆ 100 -120 ರೂ. ವರೆಗೂ ಮಾರಾಟ ಮಾಡಲಾಗುತ್ತು, ಗೆಣಸು ಕೆಜಿಗೆ 55 ರೂಪಾಯಿ, ಕಡಲೇಕಾಯಿ ಸೇರಿಗೆ 40 ರೂಪಾಯಿ, ಇದ್ದರೆ,

ಅವರೇಕಾಯಿ ಒಂದು ತೂಕ (2.5 ಕೆಜೆ)ಗೆ 100 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಹೂವು ಮಾರಿಗೆ 100- 120 ರೂ, ತನಕ ಮಾರಾಟ ಮಾಡಲಾಗುತ್ತಿದೆ.

ಮನೆಯಲ್ಲಿಯೇ ಹಬ್ಬ: ಸಂಕ್ರಾತಿ ಎಂದರೇ, ರೈತರ ಸುಗ್ಗಿ ಹಬ್ಬ. ಹಾಗಾಗಿ, ತಾವು ಬೆಳೆದ ಬೆಳೆಯನ್ನು ಪೂಜಿಸುವುದು, ಎತ್ತು ಹಾಗೂ ದನಗಳಿಗೆ ಸಂಗಾರ ಮಾಡಿ ಪೂಜಿಸಿ ಮಾಗಿಯ ಚಳಿಯಲ್ಲಿ ಕಿಚ್ಚು ಹಾಯಿಸುವುದು ಸಂಪ್ರದಾಯ. ಆದರೆ, ಈ ಬಾರಿ ವಾರಾಂತ್ಯ ಕರ್ಫ್ಯೂ ಕಾರಣ ಸಂಕ್ರಾಂತಿ ಸಂಭ್ರಮ ಕೇವಲ ಮನೆಗೆ ಸೀಮಿತವಾಗಲಿದೆ. ಮನೆಯಲ್ಲಿಯೇ ಎಳ್ಳು ಬೆಲ್ಲ ಸೇವಿಸುವುದರ ಮೂಲಕ ಹಬ್ಬ ಆಚರಣೆ ಮಾಡಬೇಕಾದ ಸ್ಥಿತಿಯಲ್ಲಿ ಜನತೆ ಇದ್ದಾರೆ.

ಊರಿನ ಕಡೆ ಮುಖ: ಇನ್ನು ಹಬ್ಬ ಶನಿವಾರ ಬಂದಿದೆ. ನಂತರ ಭಾನುವಾರ ಇರುವ ಕಾರಣ ಕರ್ತವ್ಯ ಮುಗಿಸಿ ಹಳ್ಳಿಯ ಕಡೆಗೆ ಜನತೆ ಮುಖ ಮಾಡಿದ್ದ ದಶ್ಯ ಜಿಲ್ಲೆಯಲ್ಲಿ ಕಂಡು ಬಂತು. ಹಾಗಾಗಿ ಬಸ್ ಹಾಗೂ ರೈಲಿನಲ್ಲಿ ಜನಸಂದಣೆ ಹೆಚ್ಚಾಗಿತ್ತು.

ಕರೊನಾದಿಂದಾಗಿ ಪ್ರತಿ ವರ್ಷ ವ್ಯಾಪಾರ ಕುಸಿಯುತ್ತಿದೆ. ಈ ವರ್ಷ ವ್ಯಾಪಾರ ಅಷ್ಟಕ್ಕಷ್ಟೇ. ನಷ್ಟ ಉಂಟಾಗುತ್ತಿದೆ. ಆದರೂ, ವ್ಯಾಪಾರ ಮಾಡುತ್ತಿದ್ದೇವೆ. - ರಮೇಶ್ , ವ್ಯಾಪಾರಿ, ರಾಮನಗರ