ಹುಬ್ಬಳ್ಳಿ : ನಗರದ 100ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಲೋಕಮಾನ್ಯ ಬಾಲಗಂಗಾಧರ ತಿಲಕ ಹಾಗೂ ವೀರಸಾರ್ವಕರ ಅವರ ಭಾವಚಿತ್ರಗಳನ್ನು ವಿತರಿಸಲು ವಿಶ್ವಹಿಂದು ಪರಿಷತ್ ನಿರ್ಧರಿಸಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಹಿಂಪ ಉತ್ತರ ಪ್ರಾಂತದ ಪ್ರಾಂತ ಸಂಘಟನಾ ಮಂತ್ರಿ ಕೆ. ಗೋವರ್ಧನರಾವ್, ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಮಂಡಳಿಗಳು, ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್‌ಗಳಲ್ಲಿ ಬಾಲಗಂಗಾಧರ ತಿಲಕ್ ಹಾಗೂ ವೀರ ಸಾವರ್ಕರ್ ಅವರ ಭಾವಚಿತ್ರಗಳನ್ನು ಹಾಕಬೇಕು ಎಂದು ಕೋರಿದರು.
ವಿಶ್ವ ಹಿಂದು ಪರಿಷತ್ ವತಿಯಿಂದ ನ. 6 ರಿಂದ 20ರವರೆಗೆ ಹಿತ ಚಿಂತಕ ಅಭಿಯಾನ ಆಯೋಜಿಸಲಾಗುತ್ತಿದ್ದು, ಉತ್ತರ ಪ್ರಾಂತದಿಂದ ಕನಿಷ್ಠ 5 ಲಕ್ಷ ಹಿತಚಿಂತಕರನ್ನು ರೂಪಿಸುವ ಗುರಿ ಇದೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಅಂದಾಜು 1 ಲಕ್ಷ ಹಿತಚಿಂತರನ್ನು ಮಾಡಲಾಗುವುದು. ಇದಕ್ಕಾಗಿ 15 ವರ್ಷ ಮೇಲ್ಪಟ್ಟವರನ್ನು ಸಂಪರ್ಕಿಸಲಾಗುವುದು. ಜಾಗೃತ ಹಿಂದು ಸಮಾಜದ ನಿರ್ಮಾಣ ಇದರ ಉದ್ದೇಶ ಎಂದು ತಿಳಿಸಿದರು.
ಉತ್ತರ ಪ್ರಾಂತದಲ್ಲಿ 9,500 ಗ್ರಾಮಗಳು ಇವೆ. ಮುಂಬರುವ ದಿನಗಳಲ್ಲಿ ಎಲ್ಲ ಗ್ರಾಮಗಳಲ್ಲಿ ವಿಶ್ವ ಹಿಂದು ಪರಿಷತ್‌ನ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು. ಗೋರಕ್ಷಣೆ, ಹಿಂದುಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುವುದು. ಗ್ರಾಮಗಳನ್ನು ಮತಾಂತರ ಮುಕ್ತವನ್ನಾಗಿಸಲಾಗುವುದು ಎಂದು ಹೇಳಿದರು.
ವಿಹಿಂಪ ಹುಬ್ಬಳ್ಳಿ ಮಹಾನಗರ ಅಧ್ಯಕ್ಷ ಸಂಜು ಬಡಸ್ಕರ, ಶಿವಾನಂದ ಸತ್ತಿಗೇರಿ, ರಮೇಶ ಕದಂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.