ದಾವಣಗೆರೆ: ಕನ್ನಡದ ಮೇರು ನಟ ಡಾ.ವಿಷ್ಣುವರ್ಧನ್ ಅವರಿಗೆ ರಾಜ್ಯ ಸರ್ಕಾರ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಅಖಿಲ ಕರ್ನಾಟಕ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ವಿ. ತಿರುಮಲೇಶ್ ಆಗ್ರಹಿಸಿದರು.
ನಗರದ ಭಗತ್‌ಸಿಂಗ್ ಆಟೋ ನಿಲ್ದಾಣದಲ್ಲಿ ಸೋಮವಾರ, ಸಂಘದಿಂದ ಹಮ್ಮಿಕೊಂಡಿದ್ದ ಡಾ.ವಿಷ್ಣುವರ್ಧನ್ ಅವರ 72ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕದ ಮನೆ ಮಾತಾಗಿದ್ದ ಪ್ರತಿಭಾವಂತ ನಟ ವಿಷ್ಣುವರ್ಧನ್ ಮೃತರಾಗಿ 12 ವರ್ಷಗಳು ಕಳೆದಿವೆ. ಅವರ ಸೇವೆ ಗುರುತಿಸಿ ಈಗಾಗಲೆ ಪ್ರಶಸ್ತಿ ನೀಡಬೇಕಿದ್ದ ಸರ್ಕಾರ ಗಮನ ಹರಿಸದೆ ನಿರ್ಲಕ್ಷೃ ತಾಳಿದೆ. ಇನ್ನಾದರೂ ಎಚ್ಚೆತ್ತು ಈ ದಿಸೆಯತ್ತ ಮುಂದಾಗಬೇಕು. ಇಲ್ಲವಾದಲ್ಲಿ ಸಂಘ ಹೋರಾಟ ರೂಪಿಸಲಿದೆ ಎಂದರು.
ಬೆಂಗಳೂರಿನ ಅಭಿಮಾನಿ ಸ್ಟುಡಿಯೋದಲ್ಲಿರುವ ಅವರ ಸಮಾಧಿಯ ಬಳಿ ಸ್ಮಾರಕ ನಿರ್ಮಾಣಕ್ಕೂ ರಾಜ್ಯ ಸರ್ಕಾರ ಆಸಕ್ತಿ ವಹಿಸಬೇಕು. ಡಾ.ವಿಷ್ಣುವರ್ಧನ್ ಅವರನ್ನು ಕಡೆಗಣಿಸಿರುವುದು ಕನ್ನಡಿಗರಿಗೆ ಮಾಡುವ ಅವಮಾನ ಎಂದು ಆಕ್ಷೇಪಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಇಂಜಿನಿಯರ್ ಎಸ್.ಎಲ್.ಆನಂದಪ್ಪ, ನಗರಗಳ ಯಾವುದೇ ಬಡಾವಣೆ, ರಸ್ತೆ, ವೃತ್ತಕ್ಕೆ ರಾಜಕಾರಣಿಗಳ ಹೆಸರುಗಳ ಬದಲಾಗಿ ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ನಾಮಕರಣ ಮಾಡಬೇಕೆಂದರು.
ನಗರಸಭೆಯ ಮಾಜಿ ಸದಸ್ಯ ಎನ್.ಜೆ.ನಿಂಗಪ್ಪ, ಎಸ್. ಹನುಮಂತಪ್ಪ ಹಾಲಿವಾಣ, ವಿಜಯಕುಮಾರ್ ಚಾರ್ಮನಿ, ಬಿ.ವಿ. ರಾಜಶೇಖರ್, ಮಂಜಣ್ಣ, ಪವನ್ ಎಂಟರ್‌ಪ್ರೈಸಸ್‌ನ ಟಿ.ವಿ. ಕೃಷ್ಣಮೂರ್ತಿ, ಪೈಲ್ವಾನ್ ಚನ್ನಪ್ಪ, ವಿನಾಯಕ ಪಗಡೆ ಇತರರಿದ್ದರು.
--