ಮೈಸೂರು: ಅರಮನೆ ಉತ್ತರ ಭಾಗದಲ್ಲಿರುವ ಡಾ.ವಿಷ್ಣುವರ್ಧನ್ ಉದ್ಯಾನ ಜಾಗ ವಿಷಯವಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನಗರಪಾಲಿಕೆಗೆ ಬರೆದಿರುವ ಪತ್ರ ಚರ್ಚೆಗೆ ಗ್ರಾಸವಾಯಿತು.
ರಾಜವಂಶಸ್ಥರಿಗೆ ಸೇರಿದ ಜಾಗದ ವಿಷಯ ಹೈಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಅರಮನೆ ಉತ್ತರ ಭಾಗದ ಉದ್ಯಾನ ಜಾಗ ನಮಗೆ ಸೇರಿದೆ. ಆದ್ದರಿಂದ, ಆ ಜಾಗದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬಾರದು ಎಂದು ಪ್ರಮೋದಾದೇವಿ ಒಡೆಯರ್ ಅವರು ಜುಲೈ 28 ರಂದು ಪಾಲಿಕೆಗೆ ಪತ್ರ ಬರೆದಿದ್ದಾರೆ. ಆದರೆ, ಇಷ್ಟು ವರ್ಷಕಾಲ ಸುಮ್ಮನೆ ಇದ್ದು, ಈಗ ಪತ್ರ ಬರೆದಿರುವುದು ಎಷ್ಟು ಸರಿ? ಜಾಗ ನಗರಪಾಲಿಕೆ ವ್ಯಾಪ್ತಿಯಲ್ಲಿರುವುದರಿಂದ ಈ ಬಗ್ಗೆ ಪರಿಶೀಲಿಸಬೇಕು ಎಂದು ಬಿಜೆಪಿಯ ಬಿ.ವಿ.ಮಂಜುನಾಥ್ ವಿಷಯ ಪ್ರಸ್ತಾಪಿಸಿದರು.
ಇದಕ್ಕೆ ಕಾಂಗ್ರೆಸ್‌ನ ಅಯೂಬ್‌ಖಾನ್, ಅರೀಫ್ ಹುಸೇನ್, ಜೆಡಿಎಸ್‌ನ ನಾಗರಾಜು ಇತರರು ಬೆಂಬಲ ವ್ಯಕ್ತಪಡಿಸಿ, ಈ ಹಿಂದೆ ನಗರಪಾಲಿಕೆಯಿಂದ ಚರಂಡಿ ಸೇರಿದಂತೆ ಉದ್ಯಾನ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಆಗ ಸುಮ್ಮನೆ ಇದ್ದು, ಈಗ ಜಾಗ ನಮ್ಮದು ಎಂದು ಹೇಳಲಾಗುತ್ತಿದೆ. ಪತ್ರ ಬರೆದಿರುವ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿದರು.
ಉದ್ಯಾನಕ್ಕೆ ಹೆಸರು ಇಡುವ ಅಥವಾ ಪ್ರತಿಮೆ ಸ್ಥಾಪನೆ ಮಾಡುವ ವಿಷಯ ಕುರಿತು ಕಾರ್ಯಸೂಚಿಯಲ್ಲಿ ಸರಿಯಾದ ಮಾಹಿತಿ ಇಲ್ಲದೇ ಗೊಂದಲ ಅಗಿದೆ. ಆದ್ದರಿಂದ, ಕಾರ್ಯಸೂಚಿಯನ್ನು ಸ್ಪಷ್ಟಪಡಿಸಿ ಮುಂದಿನ ಸಭೆಗೆ ಮಂಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಬಿ.ವಿ. ಮಂಜುನಾಥ್, ಉದ್ಯಾನದ ಆಸ್ತಿ ಸಂಬಂಧ ಪ್ರಕರಣ ಹೈಕೋರ್ಟ್‌ನಲ್ಲಿದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ತೀರ್ಮಾನ ಕೈಗೊಳ್ಳುವುದು ತಪ್ಪಾಗುತ್ತದೆ. ಪ್ರತಿಮೆ ಪ್ರತಿಷ್ಠಾಪನೆಗೆ ಅವಕಾಶ ನೀಡಲು ಪಾಲಿಕೆಗೆ ಅವಕಾಶ ಇಲ್ಲ. ಈ ವಿಚಾರವಾಗಿ ಮರು ಪರಿಶೀಲಿಸುವಂತೆ ಒತ್ತಾಯಿಸಿದರು.
ವಿಷ್ಣುವರ್ಧನ್ ಹೆಸರು ನಾಮಕರಣಕ್ಕೆ ಸಂಸದ ಪ್ರತಾಪಸಿಂಹ ಪತ್ರ ಬರೆದಿದ್ದಾರೆ. ಬಿಜೆಪಿ ಮೇಯರ್ ಶಿವಕುಮಾರ್ ಒಪ್ಪಿಗೆ ಕೊಟ್ಟಿದ್ದಾರೆ. ಈಗ ಬಿಜೆಪಿ ಸದಸ್ಯರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಯೂಬ್‌ಖಾನ್ ಕಾಲೆಳೆದರು.
ಸದಸ್ಯ ಕೆ.ವಿ. ಶ್ರೀಧರ್, ತಪ್ಪಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಛೀಮಾರಿ ಹಾಕಿಸಿಕೊಳ್ಳುವುದು ಬೇಡ. ಮರು ಪರಿಶೀಲಿಸುವಂತೆ ಆಗ್ರಹಿಸಿದರು. ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ, ಚರ್ಚಿಸಿ ತೀರ್ಮಾನ ಮಾಡಿರುವುದನ್ನು ಸರ್ಕಾರಕ್ಕೆ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದರು.