ದಾವಣಗೆರೆ: ಉಪನ್ಯಾಸಕರು ಪಠ್ಯಕ್ರಮ ಮಾದರಿ, ಪ್ರಶ್ನೆಪತ್ರಿಕೆ ವಿನ್ಯಾಸ ಇತ್ಯಾದಿಗಳನ್ನು ಅರಿತು ವಿಷಯಾಧಾರಿತ ಬೋಧನಾ ಕ್ರಮ ರೂಢಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಹೇಳಿದರು.
ಶಾಲಾ ಶಿಕ್ಷಣ(ಪದವಿ ಪೂರ್ವ) ಇಲಾಖೆ, ಜಿಲ್ಲಾ ಪ.ಪೂ. ಕಾಲೇಜುಗಳ ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆ ಸಹಯೋಗದಲ್ಲಿ ನಗರದ ಮಾಗನೂರು ಬಸಪ್ಪ ವಿಜ್ಞಾನ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಿಗೆ ಶನಿವಾರ ಆಯೋಜಿಸಿದ್ದ ಪುನಶ್ಚೇತನ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ಜಗತ್ತಿನ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಆನ್‌ಲೈನ್ ಮೂಲಕವೇ ಪ್ರವೇಶ ಪಡೆದು ತರಗತಿ ಹಾಗೂ ಪರೀಕ್ಷೆ ಬರೆಯುವ ವ್ಯವಸ್ಥೆ ಇದೆ. ಹೀಗಾಗಿ ಪುನಃಶ್ಚೇತನ ಕಾರ್ಯಕ್ರಮಗಳಿಂದ ಉಪನ್ಯಾಸಕರು ಬದಲಾದ ಸನ್ನಿವೇಶಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರ ಕುರಿತು ಬೋಧನೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರವು ಉಪನ್ಯಾಸಕರನ್ನು ನವೀಕರಣಗೊಳಿಸುವ ವಿಶೇಷ ಕಾರ್ಯಕ್ರಮವಾಗಿದೆ. ಶಿಕ್ಷಣವು ನಿಂತ ನೀರಾಗದೆ ಹರಿವ ನೀರಾಗಬೇಕು. ಉಪನ್ಯಾಸಕರು ಹೆಚ್ಚು ಜ್ಞಾನವಂತರಾಗಿ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳನ್ನು ಉಣಬಡಿಸಬೇಕೆಂದರು.
ಡಿಡಿಪಿಯು ಎಸ್.ಜಿ.ಕರಿಸಿದ್ದಪ್ಪ, ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಆರ್.ಸುರೇಶ್, ಕರ್ನಾಟಕ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಿ. ಪಾಲಾಕ್ಷಿ, ಮಾಗನೂರು ಬಸಪ್ಪ ಪಬ್ಲಿಕ್‌ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಸಂಗಮೇಶ್ವರ ಗೌಡರು, ಜಿಲ್ಲಾ ಪ.ಪೂ. ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ರವಿ ಸಿ.ಬಿ, ಡಾ. ಸಿ.ಎ ಸೋಮಶೇಖರಪ್ಪ, ಡಾ.ಜಿ.ಬಿ. ನರಸಿಂಹಮೂರ್ತಿ, ಆರ್. ಹನುಮಂತಾಚಾರಿ, ಕೆ.ಇ. ಶೇಖರಪ್ಪ ಇದ್ದರು.
---