ಸಿಂದಗಿ: ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾದ ವಿಷಯ ವಸ್ತುವನ್ನು ಸಿದ್ಧಪಡಿಸಿಕೊಂಡು, ಅವರಿಗೆ ಅರ್ಥವಾಗುವಂತೆ ವಿಷಯ ಸರಳೀಕರಣಕ್ಕೆ ಶ್ರಮಿಸಬೇಕು ಎಂದು ಜಿಲ್ಲಾ ಶಾಲಾ ಶಿಕ್ಷಣದ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕ ಡಾ. ಸಿ.ಕೆ. ಹೊಸಮನಿ ಹೇಳಿದರು.
ಪಟ್ಟಣದ ಎಚ್.ಜಿ. ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಇತಿಹಾಸ ಮತ್ತು ಶಿಕ್ಷಣ ಶಾಸ್ತ್ರ ವಿಷಯಗಳ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷದ ಪಿಯು ವಿದ್ಯಾರ್ಥಿಗಳಿಗೆ 20 ಅಂಕಗಳ ಯೋಜನೆ ಮತ್ತು ನಿಯೋಜನೆಗಳ ಮಾದರಿ ಬಗ್ಗೆ ಬೋಧಕರು ಅರ್ಥಮಾಡಿಕೊಂಡು, ಎಲ್ಲ ವಿಷಯಗಳನ್ನು ಸರಳೀಕರಿಸಿ, ವಿದ್ಯಾರ್ಥಿಗಳಿಂದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರ ಮಾಲಿಕೆಯಂತೆ ಬಿಡಿಸಲು ಸಿದ್ಧಗೊಳಿಸುವ ಮೂಲಕ ಜಿಲ್ಲೆಯ ಫಲಿತಾಂಶದ ಹೆಚ್ಚಳಕ್ಕೆ ಕಾಳಜಿ ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಮಾತನಾಡಿ, ಈಗಾಗಲೇ 20 ಅಂಕಗಳ ಯೋಜನೆ ಮತ್ತು ನಿಯೋಜನೆಗಳ ಕಾರ್ಯ ಮುಕ್ತಾಯವಾಗಿದೆ. ವಿದ್ಯಾರ್ಥಿಗಳಿಗೆ ಅದರ ಕುರಿತು ಅರಿವು ಮೂಡಿಸುವ ಕೆಲಸ ಬಾಕಿಯಿದ್ದು, ಬೋಧಕರು ತಮ್ಮ ಕಾಲೇಜು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಎಸ್.ಜಿ. ಲಕ್ಕುಂಡಿಮಠ, ಎಸ್.ಬಿ. ಪವಾರ, ಎಸ್.ಡಿ. ಮದರಿ, ಆರ್.ಸಿ. ಹಿರೇಮಠ, ಬಿ.ಎಸ್. ಬಿರಾದಾರ ಎಸ್.ಕೆ. ಭಜಂತ್ರಿ ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳ ಇತಿಹಾಸ ಮತ್ತು ಶಿಕ್ಷಣಶಾಸ ವಿಷಯಗಳ ಉಪನ್ಯಾಸಕರು ಉಪಸ್ಥಿತರಿದ್ದರು.
ಮಡಿವಾಳಪ್ಪ ಮಾಕೊಂಡ ಪ್ರಾರ್ಥಿಸಿದರು. ಮುಕ್ತಾಯಕ್ಕ ಕತ್ತಿ ಸ್ವಾಗತಿಸಿದರು. ಸಿದ್ದಲಿಂಗ ಕಿಣಗಿ ನಿರೂಪಿಸಿದರು. ಡಾ. ಶಾಂತುಲಾಲ ಚವ್ಹಾಣ ವಂದಿಸಿದರು.