ಚನ್ನಪಟ್ಟಣ: ಹಾಲಿನಂತಹ ಪರಿಶುದ್ಧವಾದ ಮಕ್ಕಳ ಮನಸ್ಸಿನಲ್ಲಿ ಕೆಲ ಸಮಾಜಘಾತಕ ಶಕ್ತಿಗಳು ಧರ್ಮ ಹಾಗೂ ಶಿಕ್ಷಣದ ವಿಚಾರದಲ್ಲಿ ವಿಷ ಬೀಜ ಬಿತ್ತಿ ಸಂಘರ್ಷ ಉಂಟುಮಾಡಲು ಮುಂದಾಗಿರುವುದರಿಂದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಾಲಕರು ಹಾಗೂ ಶಿಕ್ಷಕರು ಎಚ್ಚರಿಕೆ ವಹಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು.
ತಾಲೂಕಿನ ಚಕ್ಕೆರೆ ಗ್ರಾಮದ ಪಂಚಾಯಿತಿ ಪಬ್ಲಿಕ್ ಶಾಲೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಹಲವು ಶತಮಾನಗಳ ಹಿಂದೆಯೂ ಧರ್ಮದ ಹೆಸರಿನಲ್ಲಿ ಜಾತಿಗಳ ನಡುವೆ ಸಂಘರ್ಷವಿತ್ತು. ಒಂದು ವರ್ಗ ಶೂದ್ರ ಶಕ್ತಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿತ್ತು. ಈ ಹಿಂದೆ ಒಂದು ವರ್ಗ ಮಾತ್ರ ಹಿಂದು ಸಮಾಜ ಎಂದು ಬಿಂಬಿಸಿಕೊಂಡಿತ್ತು. ಇಂದು ಬಜರಂಗದಳ ಹಾಗೂ ಇನ್ನಿತರ ಸಂಘಟನೆಗಳ ಮೂಲಕ ಮತ್ತೆ ಸಮಾಜವನ್ನು ಒಡೆಯಲು ಮುಂದಾಗಿದ್ದಾರೆ. ಇಂತಹ ಸಮಾಜಘಾತಕರ ವಿರುದ್ಧ ಮಕ್ಕಳು ಹಾಗೂ ಪಾಲಕರು ಜಾಗ್ರತೆ ವಹಿಸಬೇಕು ಎಂದರು.
ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವ ಕೆಲವರು ಮುಸ್ಲಿಂರಿಂದ ಮಾಂಸವನ್ನು ಖರೀದಿಸಬಾರದು ಎಂಬ ಜಾಗೃತಿ ಆರಂಭಿಸಿದ್ದಾರೆ. ರೈತರು ಬೆಳೆಯುವ ಮಾವು. ರೇಷ್ಮೆ, ದ್ರಾಕ್ಷಿ, ಸೇರಿ ಹಣ್ಣು ಹಂಪಲುಗಳನ್ನು ಖರೀದಿಸುವವರು ಅವರೇ ಅಲ್ಲವೇ? ಅವರು ಖರೀದಿ ಮಾಡಿದರೆ ರೈತರಿಗೆ ಆದಾಯ. ಆದರೆ, ಸಂಘಟನೆಯವರು ರೈತರ ಬದುಕು ಹಾಳು ಮಾಡಲು ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಅಪಪ್ರಚಾರಕ್ಕೆ ಮರುಳಾಗಬಾರದು ಎಂದು ಎಚ್ಡಿಕೆ ತಿಳಿಸಿದರು.
ಶಿಕ್ಷಣಕ್ಕೆ ಒತ್ತು: ದೇಶದ ಅಭಿವೃದ್ಧಿಗೆ ಶಿಕ್ಷಣವೇ ಮದ್ದು. ಅದುಬಿಟ್ಟು ಯಾವುದೇ ಅನಾವಶ್ಯಕ ವಿಚಾರವಲ್ಲ. ನನ್ನ ಅಧಿಕಾರವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. 6 ಸಾವಿರ ಗ್ರಾಪಂಗಳಲ್ಲಿ ಗ್ರಾಪಂಗೊಂದರಂತೆ ಸುಸಜ್ಜಿತ ಶಾಲೆ ರೂಪಿಸುವುದು ನನ್ನ ಕನಸಾಗಿತ್ತು. ಹಳ್ಳಿ ಮಕ್ಕಳು ನಗರದ ಪ್ರದೇಶದ ಶ್ರೀಮಂತ ಮಕ್ಕಳ ಜತೆಗೆ ಪೈಪೋಟಿ ನೀಡಬೇಕಾದ ಅವಶ್ಯಕತೆ ಇದೆ. ಈ ಹಿಂದೆ ಸಿಕ್ಕ ಅಧಿಕಾರದ ಅವಧಿಯಲ್ಲೂ ಈ ವಿಚಾರಕ್ಕೆ ಹೆಚ್ಚಿನ ಗಮನ ನೀಡಿದ್ದೆ. ಮುಂದೆ ರಾಜ್ಯದ ಜನತೆಯ ಆರ್ಶೀವಾದದಿಂದ ಮತ್ತೆ ಅಧಿಕಾರಕ್ಕೆ ಬರಲಿದ್ದು, ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನದೇ ಆದ ಪರಿಕಲ್ಪನೆ ಇಟ್ಟುಕೊಂಡಿದ್ದೇನೆ. ಗ್ರಾಪಂಗೊಂದು ಹೈಟೆಕ್ ಉಚಿತ ಶಿಕ್ಷಣ ನೀಡುವ ಶಾಲೆ ರೂಪಿಸುವುದು ನನ್ನ ಕನಸು ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಪಬ್ಲಿಕ್ ಶಾಲೆ ಉದ್ಘಾಟನೆಗೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮಕ್ಕಳು ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಇಒ ಮರೀಗೌಡ ಸ್ವಾಗತಿಸಿದರು. ತಹಸೀಲ್ದಾರ್ ಎಲ್. ನಾಗೇಶ್, ತಾಪಂ ಇಒ ಚಂದ್ರು, ಚಕ್ಕೆರೆ ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ, ಉಪಾಧ್ಯಕ್ಷ ಸುಜಯ್ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಂ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಶಿಕ್ಷಣ ಇಲಾಖೆಯ ಹರಿದಾಸ್, ಯೋಗೇಶ್ ಚಕ್ಕೆರೆ ಮತ್ತಿತರರು ಉಪಸ್ಥಿತರಿದ್ದರು.