ಚಾಮರಾಜನಗರ: ಜಿಲ್ಲೆಯ ಕಾಡಿನಲ್ಲಿ ವಿಷ ಪ್ರಾಶನದಿಂದ ಐದು ಹುಲಿಗಳು ಮೃತಪಟ್ಟ ಬೆನ್ನಲ್ಲೇ ಕೋತಿಗಳ ಮಾರಣ ಹೋಮ ನಡೆದು ಹೋಗಿದೆ. ಸಿಡಿಮದ್ದು ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರಗೊಂಡಿದೆ. ಇದು ಪ್ರಾಣಿಗಳ ಜೀವ ವಿಷ ವರ್ತುಲದಲ್ಲಿ ಸಿಲುಕಿಕೊಂಡಿರುವುದನ್ನು ಒತ್ತಿ ಹೇಳುತ್ತಿದ್ದು, ಮತ್ತೆ ಇನ್ಯಾವ ಪ್ರಾಣಿ ಬಲಿಯಾಗುವುದೋ ಗೊತ್ತಿಲ್ಲ.
ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ತಾಯಿ ಮತ್ತು ನಾಲ್ಕು ಮರಿ ಹುಲಿಗಳ ಸಾವಿನ ಪ್ರಕರಣ ಇನ್ನೂ ಮಾಸಿಲ್ಲ. ಹುಲಿಗಳ ಸಾವಿಗೆ ಕಾರಣರಾದ ಆರೋಪಿಗಳು ಮಂಗಳವಾರಷ್ಟೇ ಅರಣ್ಯಾಧಿಕಾರಿಗಳ ವಿಚಾರಣೆ ಮುಗಿಸಿ ಜೈಲು ಸೇರಿದ್ದಾರೆ. ದೇಶದಲ್ಲೇ ದೊಡ್ಡ ಸುದ್ದಿಯಾದ ಈ ಪ್ರಕರಣ ಇನ್ನೂ ಹಸಿಯಾಗಿಯೇ ಇದೆ.
ಅದಾಗ್ಯೂ ಕೋತಿಗಳ ಮಾರಣ ಹೋಮ ಆಗಿಬಿಟ್ಟಿದೆ. ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ಗ್ರಾಮದ ಬಳಿ ಬುಧವಾರ ಮುಂಜಾನೆ ಕೋತಿಗಳ ಮೃತದೇಹಗಳು ರಾಶಿ ರಾಶಿಯಾಗಿ ಬಿದ್ದಿದ್ದವು. ಮೇಲ್ನೋಟಕ್ಕೆ ಜಮೀನುಗಳಲ್ಲಿ ಕೋತಿಗಳ ಕಾಟಕ್ಕೆ ಬೇಸತ್ತು ವಿಷ ಹಾಕಿ ಸಾಯಿಸಿ ಇಲ್ಲಿಗೆ ತಂದು ಎಸೆದು ಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಇನ್ನೊಂದೆಡೆ ಐದು ಹುಲಿಗಳ ಮೃತಪಟ್ಟ ಹನೂರು ತಾಲೂಕಿನಲ್ಲೇ ಮತ್ತೊಂದು ಪ್ರಾಣಿಯ ಜೀವಕ್ಕೆ ಅಮಾನವೀಯ ರೀತಿಯಲ್ಲಿ ಕುತ್ತು ಬಂದಿದೆ. ವಿ.ಎಸ್.ದೊಡ್ಡಿಯ ರೈತ ಮಂಟೇಸ್ವಾಮಿ ಸಾಕಿದ್ದ ಹಸು ಒಡೆಯರಪಾಳ್ಯದ ಟಿಬೆಟಿಯನ್ ಕ್ಯಾಂಪ್‌ನ ಎನ್-ವಿಲೇಜ್ ಬಳಿ ಮೇವು ಮೇಯುತ್ತಿದ್ದಾಗ ಆಹಾರದಲ್ಲಿ ಅಡಗಿಸಿಟ್ಟಿದ್ದ ಸಿಡಿಮದ್ದನ್ನು ತಿಂದು ಬಾಯಿ ಛಿದ್ರಗೊಂಡಿದೆ. ಹಸು ಬದುಕುವುದು ಅನುಮಾನ. ಬದುಕಿರುವವರೆಗೂ ನರಳಾಡಿ ಸಾಯುವುದು ಖಚಿತ. ಜಿಲ್ಲೆಯಲ್ಲಿ ಈಗಾಗಲೇ ಸಿಡಿಮದ್ದು ಸ್ಫೋಟಕ್ಕೆ ಹಲವು ಹಸು, ದನಗಳು, ಒಂದು ಕರಡಿ ಮೃತಪಟ್ಟಿದ್ದವು. ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೂ ದುಷ್ಕರ್ಮಿಗಳು ಕಾನೂನಿನ ಭಯವಿಲ್ಲದೆ ಕೃತ್ಯವೆಸಗುವುದನ್ನು ಮುಂದುವರಿಸಿದ್ದಾರೆ.
ಮುಂದೆ ಮತ್ತ್ಯಾವ ಪ್ರಾಣಿ?:
ಜಿಲ್ಲೆಯ ಕಾಡುಗಳಲ್ಲಿ ಮತ್ತ್ಯಾವ ಪ್ರಾಣಿ ವಿಷ ಪ್ರಾಶನಕ್ಕೆ ಬಲಿಯಾಗುವುದೋ ಗೊತ್ತಿಲ್ಲ. ಇದು ಮಾನವ-ಪ್ರಾಣಿ ಸಂಘರ್ಷ ತಾರಕಕ್ಕೇರಿರುವುದರ ಪ್ರಭಾವವೂ ಹೌದು. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ರೈತರಿಗೆ ಬೆಳೆಗಳ ರಕ್ಷಣೆ ಮಾಡಿಕೊಳ್ಳಲು ಆಗುತ್ತಿಲ್ಲ. ಮಾನವರ ಮೇಲೆ ಕಾಡುಪ್ರಾಣಿಗಳ ದಾಳಿ ನಡೆಯುತ್ತಿದೆ. ಕಾಡುಪ್ರಾಣಿಗಳನ್ನು ಮನುಷ್ಯರು ಸಾಯಿಸುತ್ತಿದ್ದಾರೆ. ವಿಷ ಪ್ರಾಶನ ಮಾಡಿರುವ ಪ್ರಕರಣಗಳಲ್ಲಿ ಬೇಟೆಗಾರಿಕೆಯ ದುರುದ್ದೇಶಗಳು ಇರುವಂತೆಯೇ, ದ್ವೇಷವೂ ಅಡಗಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ದ್ವೇಷದ ನಂಜಿಗೆ ಮತ್ತ್ಯಾವ ಪ್ರಾಣಿ ಬಲಯಾಗುವುದೋ ತಿಳಿಯದು.
ಚಿರತೆ ಸಾವು ಮುಚ್ಚಿಟ್ಟಿದ್ದಾೃಕೆ? ಮಲೆ ಮಹದೇಶ್ವರ ವನ್ಯಜೀವಿಧಾಮದ ಕೌದಳ್ಳಿ ವಲಯದ ರಾಮಾಪುರ ಮತ್ತು ಮಾರ್ಟಳ್ಳಿ ಗಡಿಯಲ್ಲಿ 15 ದಿನಗಳ ಹಿಂದೆ ಚಿರತೆ ಮೃತಪಟ್ಟರುವುದರ ತನಿಖೆ ನಡೆಸಲು ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಂಗಳವಾರ ಸೂಚನೆ ನೀಡಿದ್ದಾರೆ. 7 ದಿನಗಳ ಒಳಗಾಗಿ ವರದಿ ಸಲ್ಲಿಸಬೇಕಾಗಿದ್ದು, ಚಿರತೆಯ ಕಾಲುಗಳನ್ನು ಕತ್ತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನು ಅರಣ್ಯಾಧಿಕಾರಿಗಳು ಇಷ್ಟು ದಿನಗಳವರೆಗೆ ಬಹಿರಂಗ ಪಡಿಸದೆ ಮುಚ್ಚಿಟ್ಟಿದ್ದೇಕೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ತನಿಖೆ ವರದಿ ಬಂದ ಬಳಿಕ ಸತ್ಯ ಬಯಲಿಗೆ ಬರಲಿದೆ.
ಮಾವನ-ಪ್ರಾಣಿ ಸಂಘರ್ಷ ತಪ್ಪಿಸುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಲವಾಗಿದೆ. ಕೋತಿಗಳ ಸಾವಿನ ಹಿಂದೆ ಉಪಟಳ, ಬೆಳೆ ನಾಶದ ಕೋಪವಿರಬಹುದು. ಐದು ಹುಲಿ ಸತ್ತ ಪ್ರಕರಣದಲ್ಲೂ ಹಸು ಕೊಂದ ದ್ವೇಷವಿತ್ತು. ಅರಣ್ಯ ಇಲಾಖೆಯವರು ರೈತರಿಗೆ ಸರಿಯಾದ ಪರಿಹಾರ ಕೊಟ್ಟ ತ್ವರಿತವಾಗಿ ಸ್ಪಂದಿಸುವುದಿಲ್ಲ. ಪುಣಜನೂರು ದೊರೆಸ್ವಾಮಿ, ಪರಿಸರವಾದಿ, ಚಾಮರಾಜನಗರ ಮೇಲ್ನೋಟಕ್ಕೆ ಕೋತಿಗಳ ಸಾವಿಗೆ ವಿಷ ಪ್ರಾಶನ ಕಾರಣವೆಂದು ಕಂಡುಬಂದಿದೆ. ರಕ್ತದ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಿದ್ದೇವೆ. ಪ್ರಕರಣದ ಸಂಬಂಧ ಎ್ಐಆರ್ ದಾಖಲು ಮಾಡಲಾಗಿದೆ. ಕೃತ್ಯ ಎಸಗಿರುವವರನ್ನು ಪತ್ತೆ ಮಾಡಲು ತಂಡ ರಚನೆ ಮಾಡಲಾಗಿದೆ. ಪ್ರಭಾಕರನ್, ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ ಒಡೆಯರಪಾಳ್ಯದಲ್ಲಿ ಸಿಡಿಮದ್ದು ತಿಂದು ಹಸು ಬಾಯಿ ಛಿದ್ರಗೊಂಡಿರುವ ಪ್ರಕರಣದ ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದೇವೆ. ಸಿಡಿಮದ್ದು ಇಡುವ ಕೃತ್ಯದಲ್ಲಿ ಈ ಹಿಂದೆ ಭಾಗಿಯಾಗಿದ್ದವರ ಪಾತ್ರವಿದೆಯೇ, ಪ್ರಸ್ತುತ ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಧಮೇಂದ್ರ, ಡಿವೈಎಸ್ಪಿ