ಬೆಂಗಳೂರು ಗ್ರಾಮಾಂತರ: ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ತಂಪಿನ ವಾತಾವರಣ ಅರಸಿಕೊಂಡು ಹಾವುಗಳು ಜನವಸತಿ ಪ್ರದೇಶಗಳತ್ತ ಧಾವಿಸುವುದು ಸಾಮಾನ್ಯವಾಗಿರುವುದರಿಂದ ಬೇಸಿಗೆ ಸಂದರ್ಭದಲ್ಲಿ ಸಾರ್ವಜನಿಕರು ಕೆಲವೊಂದು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.
ಹಾವು ಕಡಿತಕ್ಕೆ ಆ್ಯಂಟಿ ಸ್ನೇಕ್ ವೀನೋಮ್ ಎಂಬ ವಿಷನಿರೋಧಕ ಚುಚ್ಚುಮದ್ದು ಇದ್ದು, ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಹಾವು ಕಡಿದ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು. ಇದನ್ನು ಗೋಲ್ಡನ್ ಅವರ್ ಎಂದು ಕರೆಯುತ್ತಾರೆ. ವಿಷಪೂರಿತ ಹಾವು ಕಡಿತದಿಂದ ಮನುಷ್ಯನ ದೇಹದಲ್ಲಿ ರಕ್ತನಾಳದ ಮೂಲಕ ವಿಷ ಹರಡಿ ಸಾವು ಸಂಭವಿಸುವ ಸಾಧ್ಯತೆ ಇರುವುದರಿಂದ ತಡಮಾಡದೆ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೊರತೆ ನೀಗಿಸಲಾಗಿದೆ: ಕೆಲ ವರ್ಷದ ಹಿಂದೆ ಹಾವು ಕಡಿತಕ್ಕೆ ವಿಷನಿರೋಧಕ ಚುಚ್ಚುಮದ್ದಿನ ಕೊರತೆ ಇತ್ತು. ಆದರೆ ಈಗ ಅಂಥ ಪರಿಸ್ಥಿತಿ ಇಲ್ಲ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಭ್ಯವಿದೆ. ಪ್ರಾಥಮಿಕ ಚಿಕಿತ್ಸೆ ಹಾಗೂ ಚುಚ್ಚುಮದ್ದಿನಿಂದ ಪ್ರಾಣ ರಕ್ಷಣೆ ಮಾಡಬಹುದಾಗಿದೆ.
ಗಾಬರಿಯಾಗಬಾರದು: ನಾವು ಸುಮ್ಮನೆ ಕುಳಿತಿದ್ದಾಗ ನಮ್ಮ ದೇಹದಲ್ಲಿ ಆಗುವ ರಕ್ತ ಸಂಚಾರದ ವೇಗಕ್ಕೂ ನಾವು ನಡೆದಾಡುವಾಗ ಅಥವಾ ಕೆಲಸ ಮಾಡುವಾಗ ರಕ್ತ ಸಂಚಾರದ ವೇಗಕ್ಕೂ ವ್ಯತ್ಯಾಸವಿರುತ್ತದೆ. ಆದ್ದರಿಂದ ಹಾವು ಕಚ್ಚಿದ ವೇಳೆ ದೇಹದಲ್ಲಿ ವೇಗವಾಗಿ ರಕ್ತ ಹರಿಯಲು ಅನುವು ಮಾಡಿಕೊಡಬಾರದು. ಈ ಸಮಯದಲ್ಲಿ ಸಮಾಧಾನಪಡಿಸಿಕೊಳ್ಳಲು ದೀರ್ಘ ಉಸಿರಾಟ ನಡೆಸಬೇಕು. ಆದಷ್ಟು ಉದ್ವೇಗ ಕಡಿಮೆ ಮಾಡಿಕೊಳ್ಳಬೇಕು. ಆತಂಕದಿಂದಲೇ ಅಪಾಯ ಹೆಚ್ಚು ಎನ್ನುತ್ತಾರೆ ತಜ್ಞರು.
ಪ್ರಾಥಮಿಕ ಚಿಕಿತ್ಸೆ ಅಗತ್ಯ: ಹಾವು ಕಡಿದ ಜಾಗದಿಂದ ಬೇರೆ ಕಡೆ ಸುಗಮ ರಕ್ತ ಸಂಚಾರಕ್ಕೆ ತಡೆಯೊಡ್ಡುವ ಸಲುವಾಗಿ ದಾರದಲ್ಲಿ ಕಟ್ಟು ಹಾಕಿ ಅಥವಾ ಬ್ಯಾಂಡೇಜ್ ಮಾಡುವುದು ಉತ್ತಮ. ಇದರಿಂದ ವಿಷ ದೇಹದಲ್ಲಿ ದುಗ್ಧರಸ ಗ್ರಂಥಿಯ ಭಾಗಕ್ಕೆ ತಲುಪುವುದು ತಪ್ಪುತ್ತದೆ.
ಲಕ್ಷಣಗಳೇನು?: ಹಾವು ಕಡಿತದ ಬಳಿಕ ಮನುಷ್ಯನ ದೇಹದಲ್ಲಿ ಕೆಲವೊಂದು ಬದಲಾವಣೆ ಕಂಡುಬರುತ್ತದೆ ಮುಖ್ಯವಾಗಿ ಉಸಿರಾಟದ ತೊಂದರೆ, ನರದೌರ್ಬಲ್ಯ, ಬೆಂಡಾಗುವುದು, ರಕ್ತದೊತ್ತಡದಲ್ಲಿ ಏರುಪೇರು, ಉರಿ, ಊತ, ಕಣ್ಣುಗಳ ರೆಪ್ಪೆ ತೇವಾಂಶ ಕಳೆದುಕೊಳ್ಳುವುದು ಮತ್ತಿತರ ಬದಲಾವಣೆಯಾಗುತ್ತದೆ.
ಬೇಸಿಗೆಯಲ್ಲಿ ಎಚ್ಚರ: ರಾತ್ರಿ ವೇಳೆ ಮಲಗುವ ಮೊದಲು ಮನೆಒಳಗೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಬೇಕು, ಕಿಟಿಕಿ ಬಾಗಿಲುಗಳನ್ನು ಮುಚ್ಚಬೇಕು, ಸಾಧ್ಯವಾದರೆ ಮೆಸ್ ಅಳವಡಿಸುವುದು ಸೂಕ್ತ, ರಾತ್ರಿ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಹೊರಹೋಗುವಾಗ ಟಾರ್ಚ್ ಬಳಸುವುದು ಮುಖ್ಯ, ವಾಹನಗಳನ್ನು ತೆಗೆಯುವಾಗ ಪರಿಶೀಲಿಸುವುದೂ ಸೇರಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಅಧಿಕಾರಿಗಳ ಮನವಿಯಾಗಿದೆ.
ಜಿಲ್ಲೆಯಲ್ಲಿ ಹಾವು ಕಡಿತಕ್ಕೆ ವಿಷನಿರೋಧಕ ಚುಚ್ಚುಮದ್ದಿನ ಕೊರತೆ ಇಲ್ಲ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲೂ ಔಷಧ ಲಭ್ಯವಿದೆ. ಜನತೆ ಗಾಬರಿಗೊಳ್ಳುವ ಅಗತ್ಯವಿಲ್ಲ. ಆದರೆ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬ ಮಾಡಬಾರದು ಡಾ.ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ