ಜಿಲ್ಲೆ

ವಿಶ್ವೇಶ್ವರಯ್ಯ ಕೊಡುಗೆ ಅನನ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂಜಿನಿಯರಿಂಗ್ ಮತ್ತು ಯೋಜನಾ ಕ್ಷೇತ್ರಕ್ಕೆ ಸರ್.ಎಂ. ವಿಶ್ವೇಶ್ವರಯ್ಯ ಅನನ್ಯ ಕೊಡುಗೆ ನೀಡಿ ಜನಪ್ರಿಯರಾಗಿದ್ದಾರೆ. ಅವರ ಅಸಾಧಾರಣ ಜ್ಞಾನದ ಮೂಲ ಮತ್ತು ಮುಂದುವರಿದ ಯೋಜನೆಗಳಲ್ಲಿ ನಾವೀನ್ಯತೆಯಿಂದ ಭಿನ್ನವಾಗಿ ಭಾರತೀಯ ಇಂಜಿನಿಯರಿಂಗ್ ಪಿತಾಮಹರಾದರು ಎಂದು ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಕೆ. ಗೋಪಿನಾಥ ಹೇಳಿದರು.
ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಎಸ್.ಎಸ್. ವಿದ್ವಾನ ಮತ್ತು ಗುರುಕುಮಾರ ದತ್ತಿ ಹಾಗೂ ಮಲ್ಲಮ್ಮ ಮೂಲಿಮನಿ ದತ್ತಿ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಹಾಗೂ ಅಭಿಯಂತರರಿಗೆ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೆ ಮೂಲ ಕಲ್ಪನೆ ಹಾಕಿದ ವಿಶ್ವೇಶ್ವರಯ್ಯನವರ ಜನ್ಮ ದಿನದಂದು ಸಾಧಕ ಇಂಜಿನಿಯರ್ಸ್‌ಗೆ ಗೌರವಿಸಿದ್ದು ಸಂತಸ ತಂದಿದೆ ಎಂದರು.
ಸರ್.ಎಂ. ವಿಶ್ವೇಶ್ವರಯ್ಯ ಕುರಿತು ರಾಜಶೇಖರ ಪಾಟೀಲ ಉಪನ್ಯಾಸ ನೀಡಿದರು. ಅಭಿಯಂತರರಾದ ವಿಜಯೇಂದ್ರಗೌಡ ಪಾಟೀಲ, ಸುಚಿತ ಅಂಗಡಿ, ಸುನೀಲ ಬಾಗೇವಾಡಿ, ಶಾಂತವೀರ ಬೆಟಗೇರಿ, ಸುರೇಶ ಬಾಳಿ, ಕಬೀರ ನದಾಫ್, ನಯನಾ ವ್ಯಾಸಮುದ್ರಿ, ಶಿವಾನಂದ ಗೋಪಯ್ಯ, ಅರುಣ ಶೀಲವಂತ, ರಾಜು ಬಿರಜನ್ನವರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ದತ್ತಿದಾನಿ ಡಾ. ಗಂಗೂ ಮೂಲಿಮನಿ, ಉಮಾದೇವಿ ಬಾಗಲಕೋಟ, ಎಸ್.ಎಂ. ದಾನಪ್ಪಗೌಡರ, ಬಿ.ಜಿ. ಬಾರ್ಕಿ, ಡಾ.ಪುಷ್ಪಾ ಬಸನಗೌಡರ, ಇತರರು ಇದ್ದರು.
ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು. ಮಹಾಂತೇಶ ನರೇಗಲ್ಲ ನಿರೂಪಿಸಿದರು. ಡಾ.ಎಸ್.ಎಸ್. ದೊಡಮನಿ ವಂದಿಸಿದರು.