ಹುಕ್ಕೇರಿ: ಗ್ರಾಹಕರು, ಸದಸ್ಯರು ಮತ್ತು ಸಿಬ್ಬಂದಿ ವಿಶ್ವಾಸಕ್ಕೆ ಚ್ಯುತಿ ಬರದಂತೆ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದು ಸಚಿವ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸ್ಥಳೀಯ ವಿದ್ಯುತ್ ಸಹಕಾರಿ ಸಂಘಕ್ಕೆ ನೇಮಕಗೊಂಡ ನೌಕರರಿಗೆ ಶನಿವಾರ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿ, ಹಲವು ವರ್ಷಗಳಿಂದ ಸಂಘದ ಆಡಳಿತ ಚುಕ್ಕಾಣಿ ಹಿಡಿದವರು ಸಂಘದ ಚುನಾವಣೆಗೆ ಈಗಾಗಲೇ ತಾಲೀಮು ಪ್ರಾರಂಭಿಸಿದ್ದಾರೆ. ಅವರನ್ನು ಎದುರಿಸಬೇಕಾದರೆ ಆಡಳಿತ ಮಂಡಳಿ ಅಧ್ಯಕ್ಷರಿಗೆ ೧೦ ನಿರ್ದೇಶಕರ ಸಹಕಾರ ಬೇಕು ಎಂದರು.
ಪ್ರಾಯೋಗಿಕವಾಗಿ ಎಲಿಮುನ್ನೋಳಿಗೆ ಅಳವಡಿಕೆ: ನಿರಂತರ ವಿದ್ಯುತ್ ಯೋಜನೆಯನ್ನು ಪ್ರಾಯೋಗಿಕವಾಗಿ ಎಲಿಮುನ್ನೋಳಿ ಗ್ರಾಮಕ್ಕೆ ಅಳವಡಿಸಲಾಗುತ್ತಿದೆ. ಬಳಿಕ ಶಿಂಧೆವಾಡಿ ಮತ್ತು ಇಂಗಳಿ ಗ್ರಾಮದಲ್ಲಿ ಅಳವಡಿಸುತ್ತೇವೆ. ಮುಂಬರುವ ದಿನಗಳಲ್ಲಿ ಸಂಘದ ವ್ಯಾಪ್ತಿಯ ಗ್ರಾಮಗಳಲ್ಲೂ ಯೋಜನೆಗೆ ಚಾಲನೆ ನೀಡುವುದಾಗಿ ತಿಳಿಸಿದರು. ಖಾಸಗಿ ಕಂಪನಿಗಳಿಂದ ಕಡಿಮೆ ದರದಲ್ಲಿ ವಿದ್ಯುತ್ ಖರೀದಿಸಿ ಗ್ರಾಹಕರಿಗೆ ನೀಡುವ ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.
ನಿಖಿಲ್ ಆಹ್ವಾನಿಸದ್ದಕ್ಕೆ ಆಕ್ಷೇಪ: ಶಾಸಕ ನಿಖಿಲ ಕತ್ತಿ ಅವರನ್ನು ಸಮಾರಂಭಕ್ಕೆ ಆಹ್ವಾನಿಸದ ಕುರಿತು ಆಕ್ಷೇಪಿಸಿದರು. ೧೭ ವರ್ಷಗಳಿಂದ ಸಂಘದ ಆಡಳಿತ ಗಮನಿಸಿ ಪರೋಕ್ಷವಾಗಿ ಮಾರ್ಗದರ್ಶನ ಮಾಡುತ್ತಿದ್ದ ನಾನು ಇದೀಗ ನೇರವಾಗಿ ಆಡಳಿತ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಮಾಜಿ ಸಚಿವ ಶಶಿಕಾಂತ ನಾಯಿಕ ಮತ್ತು ಸಂಘದ ನಿರ್ದೇಶಕ ಶಶಿರಾಜ ಪಾಟೀಲ ಮಾತನಾಡಿ, ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯವರು ಬದಲಾವಣೆ ಮಾಡಿದ್ದಾರೆ. ಸಂಘದ ಸ್ಥಾಪನೆಯ ರೂವಾರಿ ದಿ.ಅಪ್ಪಣ್ಣಗೌಡರ ಕನಸನ್ನು ನನಸು ಮಾಡುವುದೇ ಮಂಡಳಿ ಉದ್ದೇಶವಾಗಿದೆ ಎಂದು ಹೇಳಿದರು.
ವಿದ್ಯುತ್ ಸಹಕಾರಿ ಸಂಘಕ್ಕೆ ನೇಮಕಗೊಂಡ ೧೨೪ ನೌಕರರಿಗೆ ಕಾಯಂ ನೇಮಕಾತಿ ಆದೇಶ ಪತ್ರ ವಿತರಿಸಿದರು. ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣು ರೆಡೇಕರ, ಕುನಾಲ ಪಾಟೀಲ, ಜೋಮಲಿಂಗ ಪಾಟೋಳಿ, ಈರಪ್ಪ ಬಂಜಿರಾಮ, ಬಸಗೌಡ ಮಗೆನ್ನವರ, ಸೋಮಲಿಂಗ ಪಾಟೀಲ, ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಮುಖಂಡರಾದ ಮೌನೇಶ ಪೋತದಾರ, ರಿಷಬ್ ಪಾಟೀಲ ಇತರರಿದ್ದರು. ಸಂಘದ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ ಸ್ವಾಗತಿಸಿದರು. ಸ್ಥಾನಿಕ ಅಭಿಯಂತ ನೇಮಿನಾಥ ಖೇಮಲಾಪೂರೆ ನಿರೂಪಿಸಿದರು. ನಿರ್ದೇಶಕ ರವೀಂದ್ರ ಹಿಡಕಲ್ ವಂದಿಸಿದರು.
ಸರ್ಕಾರಕ್ಕೆ ವಿದ್ಯುತ್ ಸಹಕಾರಿ ಸಂಘದವರು ದಂಡದ ರೂಪದಲ್ಲಿ ಕೊಡಬೇಕಾದ ೨೦೦ ಕೋಟಿ ರೂ. ಬಾಕಿ ಮನ್ನಾ ಮಾಡುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ಮಾತನಾಡಿದ್ದೇನೆ. ಸಂಘದ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಂದ ಬರಬೇಕಾಗಿದ್ದ ೧೨ ಕೋಟಿ ರೂ. ಬಾಕಿ ಬಿಲ್‌ನಲ್ಲ್ಲಿ ೪ ಕೋಟಿ ರೂ. ತುಂಬಿಸಲಾಗಿದೆ. ಬಾಕಿ ಉಳಿದಿರುವ ೮ ಕೋಟಿ ರೂ.ಗಳನ್ನು ಶೀಘ್ರ ವಸೂಲಾತಿಗೆ ಸಹಕರಿಸಲು ಜಿಪಂ ಸಿಇಒ ಅವರಿಗೆ ತಿಳಿಸಿದ್ದೇನೆ. | ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ