ಯಾದಗಿರಿ: ವಿಶ್ವಾರಾಧ್ಯರು ಅಣಿಮಾದಿ ಅಷ್ಟಸಿದ್ಧಿಗಳನ್ನು ಕಟ್ಟಿ ಮೆರೆದು ಜಗದ ಸಂಚಾರ ಮಾಡುತ್ತಾ ಜನರನ್ನು ಉದ್ಧರಿಸಿದ ಜಗಜಟ್ಟಿ ಅವರಾಗಿದ್ದಾರೆ ಎಂದು ಪೀಠಾಧಿಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ನುಡಿದರು.
ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಪರಂಪರಾ ಪಾದಯಾತ್ರೆಯ ಸಮಾರೋಪ ಹಾಗೂ ಅಮವಾಸ್ಯೆ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗಂವ್ಹಾರದ ತೋಪಕಟ್ಟಿ ಹಿರೇಮಠದಲ್ಲಿ ಜನ್ಮ ತಾಳಿದ ವಿಶ್ವಾರಾಧ್ಯರು ಕಾಶೀಯಲ್ಲಿ ವ್ಯಾಸಂಗ ಪಡೆದು ಕಾಶೀ ಘನಪಂಡಿತರಾಗುತ್ತಾರೆ. ತಾವು ಸಂಪಾದಿಸಿದ ಜ್ಞಾನವನ್ನು ಈ ಲೋಕದ ಜನತೆಗೆ ಉಣ ಬಡಿಸಲು ಲೋಕ ಸಂಚಾರ ಮಾಡುತ್ತಾ ಜನರ ಕಾಳಿಕೆಯನ್ನು ಕಳೆದ ಪುಣ್ಯಾತ್ಮರೆಂದು ಹೇಳಿದರು.
ಜಾತಿ-ಮತ, ಪಂಥ-ಪAಗಡಗಳನ್ನು ಮೀರಿ ಮಾನವತೆ ನೆಲೆಗಟ್ಟಿನಲ್ಲಿ ಎಲ್ಲರೂ ಸೌಹಾರ್ದಭಾವದಿಂದ ಬಾಳಿ ಬದುಕಬೇಕೆಂಬುದು ವಿಶ್ವಾರಾಧ್ಯರ ಆಶಯವಾಗಿತ್ತು. ಅಂತೆಯೇ ಇಂದಿಗೂ ಅಬ್ಬೆ ತುಮಕೂರಿನ ಮಠದಲ್ಲಿ ಜಾತ್ಯಾತೀತ ಭಾವವನ್ನು ಕಾಪಾಡಿಕೊಂಡು ಬಂದು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಲಾಗುತ್ತಿದೆ ಎಂದರು.
ಪಾದಯಾತ್ರೆ ಜಗದ ಮತ್ತು ಜನತೆಯ ಕಲ್ಯಾಣವನ್ನು ಬಯಸಿ ಪ್ರತಿ ವರ್ಷ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ಪಾದಯಾತ್ರೆ ಆರಂಭದಿAದ ಮೂರು ದಿನಗಳ ಕಾಲ ಬಿಟ್ಟು ಬಿಡದೆ ಮಳೆ ಬಂದಿದೆ. ಇದು ಈ ವರ್ಷದ ಸಮೃದ್ಧಿಯ ಶುಭ ಸೂಚಕ ಎಂದರು. ಮೂರು ದಿನಗಳ ಕಾಲ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಅತ್ಯಂತ ಭಕ್ತಿ-ಭಾವದಿಂದ ಪರಂಪರಾ ಪಾದಯಾತ್ರೆಯಲ್ಲಿ ಭಾಗವಹಿಸಿ ವಿಶ್ವಾರಾಧ್ಯರ ಕೃಪೆಗೆ ಪಾತ್ರರಾಗಿದ್ದಿರಿ ಎಂದು ಶ್ರೀಗಳು ಹರಿಸಿದರು.
ಪಾದಯಾತ್ರೆ ವೇಳೆ ವಿವಿಧ ಹಳ್ಳಿಗಳಲ್ಲಿ, ಮಾರ್ಗಮಧ್ಯದಲ್ಲಿ ವಿವಿಧ ದಾಸೋಹ ಸೇವೆ ಮಾಡಿದ ಭಕ್ತರಿಗೆ ಮತ್ತು ಪಾದಯಾತ್ರೆ ಸುಗಮವಾಗಿ ಸಾಗಲು ಸಹಕರಿಸಿದ ಪೊಲೀಸ್, ಆರೋಗ್ಯ, ಜೆಸ್ಕಾಂ ಹಾಗೂ ವಿವಿಧ ಇಲಾಖೆ ಸೇವೆ ಕೂಡ ಸಾರ್ಥಕವಾಗಿದೆ ಎಂದರು. ಕಿರಿಯ ಶ್ರೀಗಳಾದ ಶಿವಶೇಖರ ಸ್ವಾಮೀಜಿ ಮಾತನಾಡಿದರು.
ಶಾಸಕ ಶರಣಗೌಡ ಕಂದಕೂರ, ಮಾಜಿ ಸಚಿವ ರಾಜುಗೌಡ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಸದಸ್ಯ ಹಣಮಂತ ಇಟಗಿ, ಮುಖಂಡರಾದ ದೇವೇಂದ್ರನಾಥ ನಾದ್, ಡಾ.ಸುಭಾಷಚಂದ್ರ ಕೌಲಗಿ, ಚನ್ನಪ್ಪಗೌಡ ಮೊಸಂಬಿ, ವಿಶ್ವನಾಥ ಸಿರವಾರ, ನರಸಣ್ಣಗೌಡ ರಾಯಚೂರು, ಟಿ.ಎನ್.ಭೀಮುನಾಯಕ್, ಡಾ.ವೀರಭದ್ರಪ್ಪ ಯಲ್ಹೇರಿ, ಡಾ.ವೀರೇಶ ಜಾಕಾ, ನಾಗರಡ್ಡಿ ಪಾಟೀಲ್ ಕರದಾಳ್, ರಮೇಶ ದೊಡ್ಡಮನಿ, ಶರಣಗೌಡ ಬಲಕಲ್, ಬಸವಣ್ಣ ದೇವರಹಳ್ಳಿ, ಕೃಷ್ಣ ದಾಸನಕೇರಿ, ಅವಿನಾಶ, ಚನ್ನಯ್ಯ ಮಾಳಿಕೇರಿ ಇತರರಿದ್ದರು.