ಜಿಲ್ಲೆ

ವಿಶ್ವಶ್ರೇಷ್ಠ ಭಾರತೀಯ ಸಂಸ್ಕೃತಿ ಪಾಲಿಸಿ

ಕಮಲನಗರ ಗ್ರಾಮೀಣ: 12 ತಿಂಗಳಲ್ಲಿ ಶ್ರಾವಣ ಮಾಸ ಹಿಂದೂ ಸಂಸ್ಕೃತಿಯಲ್ಲಿ ಅತಿ ಶ್ರೇಷ್ಠ, ದೇಶದ ಪ್ರತಿಯೊಬ್ಬರು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತ ದೇವರ ಕೃಪೆಗೆ ಪಾತ್ರರಾಗಬೇಕು. ವಿಶ್ವದಲ್ಲೇ ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದು. ಅದನ್ನು ಪಾಲಿಸಬೇಕು ಎಂದು ಡೋಣಗಾಂವ ಗ್ರಾಮದ ಹಾವಗಿಸ್ವಾಮಿ ಮಠದ ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯ ಹೇಳಿದರು.
ಡೋಣಗಾಂವ ಗ್ರಾಮದ ಹೊರವಲಯದಲ್ಲಿರುವ ಮಹಾಳಪ್ಪಯ್ಯ ದೇವಸ್ಥಾನದಲ್ಲಿ ಶ್ರಾವಣ ಮಾಸ ನಿಮಿತ್ತ ಮೌನ ಅನುಷ್ಠಾನ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರಾವಣ ಪವಿತ್ರ ಮಾಸವಾಗಿದೆ. ಈ ಮಾಸದಲ್ಲಿ ಯುವಕರು, ಪುರುಷರು ಮತ್ತು ಮಹಿಳಾ ಭಜನಾ ಮಂಡಳಿಯವರು ಪರಸ್ಪರ ಅಂತರ ಕಾಯ್ದುಕೊಂಡು ಕಾರ್ಯಕ್ರಮಗಳನ್ನು ಮುಂದುವರಿಸಬೇಕು ಎಂದು ಹೇಳಿದರು. ಯುವಕರು ದೇಶಿ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಪರದೇಶಿ ವ್ಯಾಮೋಹ ಬಿಡಬೇಕು ಎಂದರು.
ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಭಜನೆ ನಡೆಯಿತು. ಡೋಣಗಾಂವ ತಾಪಂ ಸದಸ್ಯ ಅಪ್ಪಾಸಾಹೇಬ ದೇಶಮುಖ, ಬಾಲಾಜಿ ದೇಶಮುಖ, ಮಲ್ಲಿಕಾರ್ಜುನ ಗಂದಗೆ, ಗ್ರಾಪಂ ಮಾಜಿ ಸದಸ್ಯ ಗಣೇಶ ಕಾರಾಗಾವೆ, ವಿಜಯಕುಮಾರ ದೇಶಮುಖ, ಮಲ್ಲಿಕಾರ್ಜುನ ಪಾಟೀಲ್ ಇತರರಿದ್ದರು.