ಜಿಲ್ಲೆ

ವಿಶ್ವಶಾಂತಿ ದಿನಾಚರಣೆ ಅಂಗವಾಗಿ ಮ್ಯಾರಥಾನ್ ಓಟ ಚಾಲನೆ

Hassan - Mohan Kanthur

ಹಾಸನ: ಸಣ್ಣಪುಟ್ಟ ಕಾರಣಗಳಿಗೂ ಎಲ್ಲೆಂದರಲ್ಲಿ ಅಶಾಂತಿ ಸೃಷ್ಟಿಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿಶ್ವದಲ್ಲಿ ಶಾಂತಿ ಕಾಪಾಡಲು ಯುವಜನತೆ ಮುಂದಾಗಬೇಕು ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಕರೆ ನೀಡಿದರು.
ವಿಶ್ವಶಾಂತಿ ದಿನಾಚರಣೆ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮ್ಯಾರಥಾನ್ ಓಟಕ್ಕೆ ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿ, ಜಗತ್ತಿನಲ್ಲಿ ಇಂದು ವಿವಿಧ ವಿಚಾರಗಳಿಗೆ ಮನುಕುಲದ ನಡುವೆಯೇ ಗಲಭೆ ಸೃಷ್ಟಿಯಾಗಿ ಆಶಾಂತಿ ವಾತಾವರಣ ನಿರ್ಮಾಣ ಆಗುತ್ತಿದೆ. ಉಕ್ರೇನ್, ರಷ್ಯಾ, ಇಸ್ರೇಲ್ ಹೀಗೆ ವಿವಿಧ ದೇಶಗಳ ನಡುವೆ ಯುದ್ಧ ನಡೆದು ಸಾವು-ನೋವಿನ ಸನ್ನಿವೇಶ ಸೃಷ್ಟಿಯಾಗಿದೆ. ಇದಕ್ಕೆ ಅಂತ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಿದೆ ಎಂದರು.
ನಮ್ಮ ರಾಜ್ಯದಲ್ಲೂ ಕೂಡ ಧರ್ಮ ಧರ್ಮಗಳ ನಡುವೆ ಗಲಭೆಗಳು ನಡೆಯುತ್ತಿವೆ. ಮಂಗಳೂರು, ನಾಗಮಂಗಲ, ಬೆಳಗಾವಿ, ದಾವಣಗೆರೆ, ನೆರೆಯ ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ನಡೆದಿರುವ ಶಾಂತಿ-ಸಾಮರಸ್ಯ ಕದಡುವ ಕೃತ್ಯಗಳು ಘಟಿಸಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿವೆ. ಇಂತಹ ಅಹಿತಕರ ಘಟನೆಗಳಿಗೆ ಯಾರೂ ಅವಕಾಶ ನೀಡಬಾರದು. ಮುಂದಿನ ಪೀಳಿಗೆಯ ಯುವ ಸಮೂಹ ಇವೆಲ್ಲವನ್ನೂ ತೊಡೆದು ಹಾಕಿ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಪ್ರತಿಯೊಬ್ಬರೂ ಸಹೋದರತ್ವ ಭ್ರಾತೃತ್ವ ಹೊಂದುವ ಮೂಲಕ ಪ್ರೀತಿ ವಿಶ್ವಾಸದಿಂದ ಬಾಳುವ ಅಗತ್ಯವಿದೆ.ಸರ್ವ ಜನಾಂಗಗಳ ಶಾಂತಿಯ ತೋಟವಾಗಿರುವ ಭಾರತ ದೇಶದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು.ಈ ನಿಟ್ಟಿನಲ್ಲಿ ಇಂದು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಜಿ.ಪಂ.ಸಿಇಒ. ಬಿ.ಆರ್.ಪೂರ್ಣಿಮಾ ಮಾತನಾಡಿ, ವಿಶ್ವಶಾಂತಿ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು, ಪ್ರತಿದಿನವೂ ಶಾಂತಿ ಮಂತ್ರ ಜಪಿಸಬೇಕು. ಭಾರತ ದೇಶ ಹಾಗೂ ಕರ್ನಾಟಕ ರಾಜ್ಯ ಶಾಂತಿಗೆ ಹೆಸರುವಾಸಿಯಾಗಿದೆ ಅದಕ್ಕೆ ಧಕ್ಕೆ ತರುವ ಕೆಲಸವನ್ನು ಯಾರು ಮಾಡಬಾರದು ಎಂದರು.
ಕೆಲವೊಮ್ಮೆ ಅಸಹನೆಯಿಂದ ಅನೇಕ ಸಮಸ್ಯೆಗಳು ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಶಾಂತಿ ಮಂತ್ರ ಜಪಿಸಿದರೆ ದೊಡ್ಡಮಟ್ಟದ ಅನಾಹುತ ತಪ್ಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದಿನನಿತ್ಯ ಶಾಂತಿ ಮಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಡಿವೈಎಸ್ಪಿ ಮುರಳಿಧರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಚ್.ಪಿ.ಮೋಹನ್. ಎಸ್.ಎಸ್. ಪಾಷ, ಸಮಾಜ ಸೇವಕ ಅಮ್ಜದ್ ಪಾಷ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್.ಉದಯಕುಮಾರ್ ಸೇರಿದಂತೆ ಇತರರು ಇದ್ದರು.