ಮೈಸೂರು: ವಿಶ್ವವಿದ್ಯಾಲಯಗಳು ಜಾತಿ, ಧರ್ಮಗಳ ಅಡ್ಡಾ ಆಗಲು ಅವಕಾಶ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು
ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣೆ ಕೇಂದ್ರದ ರಜತ ಮಹೋತ್ಸವ, 3 ಕೋಟಿ ರೂ. ವೆಚ್ಚದ ‘ಜ್ಞಾನದರ್ಶನ’ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಿನ ವಿದ್ಯಾರ್ಥಿ ಸಮೂಹ ಗೊಂದಲಕ್ಕೆ ಸಿಲುಕಿದೆ. ವಿದ್ಯಾರ್ಥಿ ಚಳವಳಿ ನಿಷ್ಕ್ರಿಯವಾಗಿದೆ. ಜಾತಿ ಒಂದೆಡೆ, ಧರ್ಮ ಇನ್ನೊಂದೆಡೆ ಆರ್ಭಟಿಸುತ್ತಿದೆ. ವ್ಯಕ್ತಿ ಸ್ವಾತಂತ್ರೃ ಮರೆಯಾಗುತ್ತಿದೆ.
ಪ್ರಜಾಸತ್ತಾತ್ಮಕ ಮೌಲ್ಯ, ಸಂವಿಧಾನ ಆಶಯಗಳು ತಲೆಗೆ ಹೋಗುತ್ತಿಲ್ಲ. ಈ ಕುರಿತು ಅರಿವು ಮೂಡಿಸಬೇಕಾಗಿರುವ ಪ್ರಾಧ್ಯಾಪಕರು, ಬಡ್ತಿ ಮತ್ತು ಕೇಸ್ ಭಯದಿಂದ ಮೌನವಾಗಿದ್ದಾರೆ. ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರೃವಿಲ್ಲದಿದ್ದರೆ ಸಂವಿಧಾನ ಇರಲ್ಲ ಎಂದು ಎಚ್ಚರಿಸಿದರು.
ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶರ ಕಡೆಗೆ ಶೂ ಎಸೆದಿರುವುದು ಸಂವಿಧಾನಕ್ಕೆ ನೇರ ಬೆದರಿಕೆಯಾಗಿದೆ. ಬಾಬಾ ಸಾಹೇಬರು ಬರೆದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದವರ ಕೈಯಲ್ಲಿ ಸಂವಿಧಾನ ಪ್ರತಿ ಹಿಡಿಯುವಂತೆ ಮಾಡಿದ್ದೇವೆ. ಸಂವಿಧಾನ ಪೀಠಿಕೆ ಓದು ದೇಶಾದ್ಯಂತ ಚಳವಳಿಯಾಗಿದೆ ಎಂದರು.
ಬಜೆಟ್‌ನಲ್ಲಿ ಘೋಷಣೆಯಂತೆ ಬೆಂಗಳೂರು ವಿಶ್ವವಿದ್ಯಾಲಯದ 25 ಎಕರೆ ಜಾಗದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಥೀಮ್ ಪಾರ್ಕ್ ನಿರ್ಮಿಸಲಾಗುವುದು ಎಂದರು.
ಪ್ರಾಧ್ಯಾಪಕ ಡಾ.ಜೆ.ಸೋಮಶೇಖರ್ ಮಾತನಾಡಿ, ನಮ್ಮ ಅಂಬೇಡ್ಕರ್ ಕೇಂದ್ರ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಹೀಗಾಗಿ, ವರ್ಷವಿಡೀ ರಜತ ಮಹೋತ್ಸವ ಆಚರಣೆಗೆ 8 ಕೋಟಿ ರೂ. ಮತ್ತು ಅಂಬೇಡ್ಕರ್ ವಸ್ತುಸಂಗ್ರಹಾಲಯಕ್ಕಾಗಿ 5 ಕೋಟಿ ರೂ. ನೀಡಬೇಕು. ಅಂಬೇಡ್ಕರ್ ದಾಖಲೆಗಳ ಸಂಗ್ರಹ, ಕಂಪ್ಯೂಟರ್ ಲ್ಯಾಬ್ ಸ್ಥಾಪನೆ ಸೇರಿದಂತೆ ಈ ಎಲ್ಲ ಕೆಲಸಕ್ಕೆ 15 ಕೋಟಿ ರೂ. ಅನುದಾನ ನೀಡಬೇಕು ಎಂದು ಕೋರಿದರು.
ಪಿಂಚಣಿ ಕೊಡಲು ಮೈವಿವಿ ಬಳಿ ಹಣವಿಲ್ಲ. ಪ್ರಾಧ್ಯಾಪಕರ ಕೊರತೆ ತೀವ್ರವಾಗಿ ಕಾಡುತ್ತಿದೆ. ಕೂಡಲೇ ವಿವಿ ಆರ್ಥಿಕ ಸಬಲೀಕರಣಕ್ಕೆ ಸಿಎಂ ಗಮನ ನೀಡಬೇಕು ಎಂದು ವಿನಂತಿಸಿದರು.
‘ಕರ್ನಾಟಕದಲ್ಲಿ ಅಂಬೇಡ್ಕರ್ ಹೆಜ್ಜೆ ಗುರುತುಗಳು’ ಸಾಕ್ಷೃಚಿತ್ರ ಬಿಡುಗಡೆಗೊಳಿಸಲಾಯಿತು. ದಿ.ಶ್ರೀನಿವಾಸಪ್ರಸಾದ್ ಪತ್ನಿ ಡಿ.ಭಾಗ್ಯಲಕ್ಷ್ಮಿ, ಶಾಸಕ ಕೆ.ಹರೀಶ್‌ಗೌಡ, ಎಂಎಲ್‌ಸಿಗಳಾದ ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ಕೇಂದ್ರ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್ ಇನ್ನಿತರರಿದ್ದರು.