ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ಅದ್ಭುತ ಬೆಳವಣಿಗೆಯಲ್ಲಿ ಬೋಧಕ ಸಿಬ್ಬಂದಿ ಕಾರ್ಯ ಶ್ಲಾಘನೀಯವಾಗಿದೆ ಎಂದು ವಿವಿ ಆಡಳಿತ ಮಂಡಳಿ ಸದಸ್ಯರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ಹೇಳಿದರು.
ಶರಣಬಸವೇಶ್ವರ ದೇವಸ್ಥಾನದ ದಾಸೋಹ ಮಹಾಮನೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವವಿದ್ಯಾಲಯದ ೬ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಆರು ವರ್ಷಗಳಿಂದ ನಿರಂತರ ಕೆಲಸ ಮಾಡುತ್ತಿರುವ ಸಿಬ್ಬಂದಿ, ರಾಷ್ಟ್ರೀಯ ಮೌಲ್ಯಾಂಕನ ಮಾನ್ಯತೆ ಸಿಗಲು ಅವಿರತ ಶ್ರಮಿಸಬೇಕು ಎಂದು ಕರೆ ನೀಡಿದರು.
ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯ ಮಾಡುವ ನಿಟ್ಟಿನಲ್ಲಿ ಸಂಸ್ಥಾಪಕರು, ಕುಲಾಧಿಪತಿಗಳೂ ಆದ ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರ ಕನಸು ನನಸಾಗಿಸುವ ಹಾದಿಯಲ್ಲಿ ವಿವಿ ೭ನೇ ವರ್ಷಕ್ಕೆ ಕಾಲಿಡುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ವೇಗವಾಗಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವ ವಿವಿಯನ್ನು ವಿಶ್ವದರ್ಜೆ ಮಾಡುವ ಕನಸು ನನಸಾಗಿಸಲು ಬೋಧಕ ಸಿಬ್ಬಂದಿಗೆ ಅಗತ್ಯ ನೆರವು ನೀಡುವುದಾಗಿ ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ, ವಿವಿ ಆಡಳಿತ ಮಂಡಳಿ ಸದಸ್ಯ ಬಸವರಾಜ ದೇಶಮುಖ ಮಾತನಾಡಿ, ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ಪೂಜ್ಯ ಡಾ.ಅಪ್ಪಾಜಿಯವರ ಅವಿರತ ಶ್ರಮ ಸ್ಮರಣೀಯ. ಸಂಸ್ಥಾನದ ಹಿಂದಿನ ಪೀಠಾಧಿಪತಿಗಳ ಪುಣ್ಯ ಕಾರ್ಯ ಎಲ್ಲ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೇರಣೆ ನೀಡಿ ಅಪ್ಪಾಜಿಯವರ ಕನಸಿನ ಕೂಸು ಶರಣಬಸವ ವಿಶ್ವವಿದ್ಯಾಲಯಕ್ಕೆ ಬಲವಾದ ಅಡಿಪಾಯ ಹಾಕಿತು. ೧೯೩೪ ಮತ್ತು ೨೦೧೭ರ ವರ್ಷ ಸಂಸ್ಥಾನದ ಇತಿಹಾಸದಲ್ಲಿ ತುಂಬಾ ಪ್ರಾಮುಖ್ಯ ಪಡೆದಿದೆ. ೧೯೩೪ರಲ್ಲಿ ಸಂಸ್ಥಾನ ಕಲಬುರಗಿಯಲ್ಲಿ ಮೊದಲ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಪ್ರಾರಂಭಿಸಿತು. ಅದೇ ವರ್ಷ ಡಾ.ಅಪ್ಪಾಜಿ ಜನಿಸಿದ್ದಾರೆ. ೨೦೧೭ರಲ್ಲಿ ಶರಣಬಸವ ವಿವಿ ಸ್ಥಾಪಿಸಲಾಯಿತು. ಈ ವರ್ಷ ಸಂಸ್ಥಾನದ ೯ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಜನಿಸಿದರು ಎಂದು ವಿವರಿಸಿದರು.
ವಿವಿ ಕುಲಪತಿ ಡಾ.ನಿರಂಜನ್ ನಿಷ್ಠಿ ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದಿದ್ದ ಕಲ್ಯಾಣ ಕರ್ನಾಟಕ ಪ್ರದೇಶವನ್ನು ರಾಜ್ಯದ ಪ್ರಮುಖ ಶೈಕ್ಷಣಿಕ ಕೇಂದ್ರವನ್ನಾಗಿ ಪರಿವರ್ತಿಸುವಲ್ಲಿ ಡಾ.ಅಪ್ಪಾಜಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬಣ್ಣಿಸಿದರು.
ವಿವಿ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಸ್ವಾಗತಿಸಿದರು. ಸಮಕುಲಪತಿ ಪ್ರೊ.ವಿ.ಡಿ. ಮೈತ್ರಿ, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ.ಬಸವರಾಜ ಮಠಪತಿ, ಹಣಕಾಸು ಅಧಿಕಾರಿ ಪ್ರೊ.ಕಿರಣ ಮಾಕಾ ಇತರರಿದ್ದರು. ವಿವಿಧ ಕಂಪನಿಗಳಲ್ಲಿ ಅತ್ಯುನ್ನತ ಪ್ಯಾಕೇಜ್ ಪಡೆದ ವಿವಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಆರು ವರ್ಷಗಳ ಅಲ್ಪಾವಧಿಯಲ್ಲಿ ವಿಶ್ವವಿದ್ಯಾಲಯ ಸಂಪೂರ್ಣ ವೈದ್ಯಕೀಯ ವಿಜ್ಞಾನಗಳ ಸಂಕೀರ್ಣ ಸ್ಥಾಪಿಸುವ ಮೊದಲ ಹೆಜ್ಜೆಯಾಗಿ ಡಿ.ಫಾರ್ಮಾ ಸೇರಿ ಒಂಬತ್ತು ಹೊಸ ಕೋರ್ಸ್ ಪ್ರಾರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ.
| ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ
ಚೇರ್‌ಪರ್ಸನ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ