ನೆಲಮಂಗಲ: ಮನುಜಮತ, ವಿಶ್ವಪಥ ಹಾಗೂ ವಿಶ್ವಮಾನವ ಸಂದೇಶವನ್ನು ವಿಶ್ವಕ್ಕೆ ಸಾರಿದ ಕೀರ್ತಿ ಕನ್ನಡ ನಾಡಿನ ಪರಂಪರೆಗೆ ಸಲ್ಲುತ್ತದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು ಅಭಿಪ್ರಾಯಪಟ್ಟರು.
ಪಟ್ಟಣದ ಹರ್ಷ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಕನ್ನಡ ಪರಂಪರೆ ಶೀರ್ಷಿಕೆಯಡಿ ಆಯೋಜಿಸಿದ್ದ ಬೃಹತ್ ವಸ್ತು ಪ್ರದರ್ಶನದಲ್ಲಿ ಮಾತನಾಡಿದರು.
ಆಧುನಿಕತೆ ಭರದಲ್ಲಿ ಸಾಗುತ್ತಿರುವ ಶಿಕ್ಷಣ ಸಂಸ್ಥೆಗಳು ಕೇವಲ ಕಲಿಕಾಮಾಧ್ಯಮ, ಅಂಕಗಳಿಕೆಗಷ್ಟೇ ಪ್ರಾಮುಖ್ಯತೆ ನೀಡುತ್ತಿರುವ ಸನ್ನಿವೇಶದಲ್ಲಿ ವಯಸ್ಸಿಗೂ ಮೀರಿದ ಮಾದರಿಗಳನ್ನು ಮಕ್ಕಳಿಂದಲೇ ತಯಾರಿಸಿ ಬೃಹತ್ ವಸ್ತುಪ್ರದರ್ಶನ ಆಯೋಜಿಸಿರುವುದು ಸಂತಸದ ಸಂಗತಿ ಎಂದರು.
ನಗರ ಪ್ರದೇಶಗಳಲ್ಲಿ ಪೂರ್ವಪ್ರಾಥಮಿಕ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆ ವೃದ್ಧಾಶ್ರಮಗಳ ಸಂಖ್ಯೆಯೂ ಹೆಚ್ಚುತ್ತಿವೆ. ನಗರಪ್ರದೇಶಗಳಲ್ಲಿನ ವಿಭಕ್ತಕುಟುಂಬಗಳಲ್ಲಿನ ಮಕ್ಕಳು ಅಜ್ಜಿ, ತಾತಂದಿರ ಸಂಬಂಧ ಕಳೆದುಕೊಳ್ಳುತ್ತಿರುವ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಲ್ಲಿ ಉತ್ಕೃಷ್ಟವಾದ ನಾಡಿನ ಸಮಗ್ರ ವೈವಿಧ್ಯತೆ ಪರಂಪರೆ ಪರಿಚಯಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ಒಂದು ತಿಂಗಳು ಪ್ರವಾಸ ಮಾಡಿದರೂ ರಾಜ್ಯವನ್ನು ನೋಡಲು ಸಾಧ್ಯವಾಗವುದಿಲ್ಲ. ಆದರೆ ರಾಜ್ಯದ ಸಮಗ್ರ ಪರಂಪರೆಯನ್ನು ತಿಳಿಸುವ ಎಲ್ಲ ಮಾದರಿಗಳನ್ನು ನಿರ್ಮಿಸಿರುವ ಮಕ್ಕಳು, ಶಿಕ್ಷಕರ ಶ್ರಮ ಪಾಲಕರ ಸಹಕಾರ ನಿಜಕ್ಕೂ ಶ್ಲಾಘನೀಯವೆಂದರು.
ಕನ್ನಡಿಗರು ಕೇವಲ ವೀರಶೂರರಷ್ಟೇ ಅಲ್ಲ ಕಾವ್ಯವನ್ನು ರಚಿಸಬಲ್ಲರು, ಪರರ ಧರ್ಮವನ್ನು, ವಿಚಾರಗಳನ್ನು ಗೌರವಿಸುವ ಸುಸಂಸ್ಕೃತಿ ಸಂಪತ್ತು ಇರುವುದು ಕನ್ನಡ ನಾಡಿನಲ್ಲಿ ಮಾತ್ರ. ನಾಡಿನಲ್ಲಿರುವ ಬಹುತ್ವತೆ ದೇಶದಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳುವಿಕೆ ಸಾಧ್ಯವಾಗಿದೆ ಎಂದರು.
ಮಕ್ಕಳ ಮನಸ್ಸು ಕನ್ನಡಿ ಇದ್ದಂತೆ. ಅನುಕರಣೆ ಮಾಡಿ ಹೆಚ್ಚು ಕಲಿಯುವುದರಿಂದ ಪರಿಣಾಮಕಾರಿ ಬೋಧನೆ ಮಾಡುವ ಜತೆಗೆ ಮಾದರಿ ವ್ಯಕ್ತಿತ್ವ ಆದರ್ಶದ ಬದುಕನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕಿದೆ. ಅತ್ಯುತ್ತಮ ಪ್ರಜೆಗಳಾಗಿ ರೂಪಿಸುವ ಕೆಲಸ ಮನೆ ಮಾಗೂ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು. ಅಧ್ಯಾಪಕ ವೃತ್ತಿ ಕೇವಲ ಹೊಟ್ಟೆಪಾಡಿನ ವೃತ್ತಿಯಾಗಬಾರದು, ಶಿಕ್ಷಕ ತಪ್ಪು ಮಾಡಿದರೆ ತಲೆಮಾರುಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಪ್ರತಿವರ್ಷವೂ ವಸ್ತುಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗುವಂತೆ ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಸಂಶೋಧನಾ ಕೌಶಲ, ಕೂತೂಹಲ ಪ್ರಜ್ಞೆಯನ್ನು ಬೆಳೆಸುವಲ್ಲಿ ವಸ್ತುಪ್ರದರ್ಶನ ಸಹಕಾರಿ. ಕೇವಲ ತರಗತಿ ಪಾಠಬೋಧನೆ ಜತೆಗೆ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಪ್ರಯೋಗ, ಮಾದರಿ ತಯಾರು ಮಾಡುವುದರಿಂದ ಕಲಿಕೆ ಸುಲಭವಾಗಲಿದೆ. ಇದನ್ನು ಮನಗಂಡ ಶಾಲಾ ಆಡಳಿತ ಮಂಡಳಿಯಿಂದ ವಸ್ತುಪ್ರದರ್ಶನ ಆಯೋಜಿಸಲಾಗಿದೆ ಎಂದು ಶಾಲಾ ಸಂಸ್ಥಾಪಕ ಅಧ್ಯಕ್ಷ ಎಸ್.ಶಿವಕುಮಾರ್ ತಿಳಿಸಿದರು.
ಸಮೂಹ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ಗಿರಿಜಾಶಿವಕುಮಾರ್, ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಸಿ. ನಾರಾಯಣಗೌಡ, ಪ್ರೌಢಶಾಲಾ ಮುಖ್ಯಶಿಕ್ಷಕಿ ಉಮಾದೇವಿ, ಪೂರ್ವ ಪ್ರಾಥಮಿಕ ಶಾಲೆ ಪ್ರಾಂಶುಪಾಲೆ ಪೂರ್ಣಿಮಾ, ಸಮೂಹ ಸಂಸ್ಥೆಯ ಪ್ರಾಂಶುಪಾಲರಾದ ಜೆಸಿಂತಾ, ಜಯಪ್ರಕಾಶ್ ಜರ್ನಾದನ್, ರವಿನಂದನ್ , ಉಪಪ್ರಾಂಶುಪಾಲೆ ಮತ್ತಿತರರು ಇದ್ದರು.
ಆಕರ್ಷಕ ಮಾದರಿ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಪುರಾಣ, ಧಾರ್ಮಿಕ ಕೇಂದ್ರಗಳ ಜತೆಗೆ ಐತಿಹಾಸಿಕ ಸ್ಮಾರಕಗಳ ಮಾದರಿಗಳು, ಅಣೆಕಟ್ಟೆ, ವಿಜ್ಞಾನದ ಪ್ರಯೋಗ, ಕೋಟೆಗಳು, ಪ್ರಮುಖ ಬೆಳೆಗಳು, ಜನ ಜೀವನದ ಸಂಕೇತವಾಗಿರುವ ಉಡುಪು, ಆಹಾರ ಪದ್ಧತಿಯ ಸಮಗ್ರ ಮಾಹಿತಿಯನ್ನು ತಿಳಿಸುವ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿ ಮಾಹಿತಿ ನೀಡಿದ್ದು ವಿಶೇಷವಾಗಿತ್ತು.