ಜಿಲ್ಲೆ

ವಿಶ್ವನಂದನ ಉದ್ಯಾನದಲ್ಲಿ ಚಿರತೆಯಿಲ್ಲ: ಜನರ ಆತಂಕ ನಿವಾರಿಸಿದ ಅರಣ್ಯ ಇಲಾಖೆ

ಮೈಸೂರು: ಕುವೆಂಪುನಗರದ ವಿಜಯ ಬ್ಯಾಂಕ್ ವೃತ್ತ ಬಳಿಯ ವಿಶ್ವನಂದನ ಉದ್ಯಾನದಲ್ಲಿ ಚಿರತೆ ಕಾಣಿಸಿಕೊಂಡಿಲ್ಲ ಎಂದು ಅರಣ್ಯ ಇಲಾಖೆ ದೃಢಪಡಿಸಿದೆ.

ಚಿರತೆ ಪ್ರತ್ಯಕ್ಷವಾಗಿದೆ ಎಂಬ ಮಾಹಿತಿಯಿಂದ ಸುತ್ತಲಿನ ಸಾರ್ವಜನಿಕರು ಆತಂಕಗೊಂಡಿದ್ದರು. ಈ ವಿಷಯ ತಿಳಿದು ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ಉದ್ಯಾನದ ಮುಖ್ಯದ್ವಾರಕ್ಕೆ ಬೀಗ ಹಾಕಿ ಸಾರ್ವಜನಿಕರ ಪ್ರವೇಶವನ್ನೂ ನಿರ್ಬಂಧಿಸಲಾಗಿತ್ತು.

‘ಚಿರತೆ ಪ್ರತ್ಯಕ್ಷವಾಗಿದೆ ಎಂಬುದು ಸುಳ್ಳು ಸುದ್ದಿಯಾಗಿದೆ. ಚಿರತೆ ಓಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿಲ್ಲ.

ಬದಲಿಗೆ ನಾಯಿ ಹೆಜ್ಜೆಗಳ ಕುರುಹುಗಳು ಪತ್ತೆಯಾಗಿದ್ದು, ಸಿಸಿ ಕ್ಯಾಮರಾದಲ್ಲೂ ನಾಯಿ ದೃಶ್ಯಗಳು ಸೆರೆಯಾಗಿದೆ. ಆದ್ದರಿಂದ ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯ ಇಲ್ಲ ಎಂದು ಡಿಸಿಎಫ್ ಕೆ.ಎನ್.ಬಸವರಾಜು ತಿಳಿಸಿದ್ದಾರೆ.