ಜಿಲ್ಲೆ

ವಿಶ್ವದಲ್ಲೇ ಕನ್ನಡ ವಚನ ಸಾಹಿತ್ಯ ಶ್ರೀಮಂತ

ಕೊಡೇಕಲ್ : ನಮ್ಮ ಕನ್ನಡ ವಚನ ಸಾಹಿತ್ಯ ಜಗತ್ತಿನಲ್ಲೇ ಅತಿ ಶ್ರೀಮಂತವಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಗ್ರಾಮದ ವಿರಕ್ತ ಮಠದಲ್ಲಿ ಶ್ರೀ ರಾಚೇಶ್ವರ ಶಿವಯೋಗಿಗಳ ೫೫೫ನೇ ಸ್ಮರಣೋತ್ಸವ ನಿಮಿತ್ತ ಭಾನುವಾರ ಸಂಜೆ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಶ್ರೀ ನೀಲಕಂಠ ಸ್ವಾಮೀಜಿ ಅವರಿಂದ ಶಿವಾನುಭವ ರತ್ನ ಪ್ರಶಸ್ತಿ ಸ್ವೀಕರಿಸಿದ ಅವರು, ವಚನ ಸಾಹಿತ್ಯ ಬಸವಾದಿ ಪ್ರಮಥರ ಕಾಲದಿಂದ ಬಂದಿದೆ. ಪ್ರಪಂಚದ ೪೧ ಭಾಷೆಗಳಲ್ಲಿ ಅನುವಾದಗೊಂಡು ಕನ್ನಡ ಶ್ರೀಮಂತವಾಗಿಸಿದ್ದಲ್ಲದೆ ೭೩ ದೇಶಗಳ ಪಠ್ಯಪುಸ್ತಕದಲ್ಲಿ ವಚನ ಸಾಹಿತ್ಯ ಪ್ರಕಟವಾಗಿರುವುದು ಹೆಮ್ಮೆಯ ವಿಷಯ ಎಂದರು.

ಶರಣರು ಬರೆದಿರುವ ವಚನ ಸಾಹಿತ್ಯದ ಬಗ್ಗೆ ವಿದೇಶದಲ್ಲಿ ವಿಶೇಷ ಆಸಕ್ತಿ ಇದೆ. ಆದರೆ ನಮ್ಮ ನಾಡಿನಲ್ಲಿಯೇ ಸರಿಯಾದ ಮಾಹಿತಿ ಇಲ್ಲದಿರುವುದು ವಿಷಾದನೀಯ. ಯುವಕರು ನಾಡು-ನುಡಿ ಸೇವೆಗೆ ಸದಾ ಸಿದ್ಧರಾಗಿರಬೇಕು. ಅಲ್ಲದೆ ವಚನ ಸಾಹಿತ್ಯವನ್ನು ತಿಳಿದುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ವಚನ ಸಾಹಿತ್ಯವನ್ನು ಪ್ರವಚನದ ಮೂಲಕ ಮನೆ ಮನೆಗೆ ತಲುಪಿಸುತ್ತಿರುವ ಈ ಕಾರ್ಯವನ್ನು ಶ್ಲಾಘಿಸಿದರು.

ಬೈಲೂರು ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆ ಕಾಣುವ ಸುಂದರ ದೇಶ. ಕರುನಾಡು ಬಸವಾದಿ ಪ್ರಮಥರು ಬಾಳಿ ಬದುಕಿದಂತಹ ಶ್ರೀಮಂತ ನೆಲ. ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕಾರ, ಶಿಕ್ಷಣ ನೀಡಬೇಕು. ಇದರಿಂದ ಸದೃಢ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದರು.

ಧರ್ಮ ಪ್ರಚಾರಕ್ಕೆ ಅನುಮತಿ ನೀಡದೆ ರಾಜಕೀಯ ಮಾಡುವವರಿಗೆ ಎಂದೂ ಒಳಿತಾಗುವುದಿಲ್ಲ. ಅವರಿಗೆ ಧರ್ಮ ಪ್ರಚಾರವೇ ಬೇಡವೆಂದ ಮೇಲೆ ಬಸವಣ್ಣನೂ ಬೇಡ ಎನ್ನುವ ಮೂಲಕ ಆಧ್ಯಾತ್ಮಿಕ ಪ್ರವಚನಕ್ಕೆ ಅಡ್ಡಿಪಡಿಸಿದವರ ವಿರುದ್ಧ ಚಾಟಿ ಬೀಸಿದರು.

ಧರ್ಮ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಗ್ರಾಮೀಣ ಭಾಗದಲ್ಲಿ ಇಂತಹ ಧಾರ್ಮಿಕ ಕಾರ್ಯಗಳ ಮೂಲಕ ಜನರಲ್ಲಿ ಆಧ್ಯಾತ್ಮಿಕ ತಿಳಿ ಹೇಳುತ್ತಿರುವ ಶ್ರೀ ನೀಲಕಂಠ ಸ್ವಾಮೀಜಿ ಸೇವೆಯನ್ನು ಶ್ಲಾಘಿಸಿದರು.

ಶ್ರೀ ವೃಷಭೇಂದ್ರ ಅಪ್ಪ, ಶ್ರೀ ಸಿದ್ಧಲಿಂಗ ದೇವರು, ಶ್ರೀ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ, ರಾಣಿ ರಂಗಮ್ಮ ಜಹಾಗಿರದಾರ, ರಾಜಾ ವೆಂಕಟಪ್ಪ ನಾಯಕ ಜಹಾಗಿರದಾರ, ಹನುಮಂತ ನಾಯಕ, ರಂಗನಾಥ ದೊರಿ, ಎಚ್.ಸಿ. ಪಾಟೀಲ್, ಗದ್ದೆಪ್ಪ ಪೂಜಾರಿ, ಡಾ.ಬಸನಗೌಡ ಅಳ್ಳಿಕೋಟಿ, ಶಾಮಸುಂದರ ಜೋಶಿ, ವೀರಸಂಗಪ್ಪ ಹಾವೇರಿ, ಭೀಮನಗೌಡ ಮಾಲಿಪಾಟೀಲ್, ದಾವಲಸಾಬ್ ಕಮತಗಿ, ವೆಂಕಟಗಿರಿ ದೇಶಪಾಂಡೆ, ಬಿ.ಎನ್.ಪೊಲೀಸ್ ಪಾಟೀಲ್, ಮೋಹನ ಪಾಟೀಲ್, ರಾಮನಗೌಡ ವಠಾರ ಇತರರಿದ್ದರು.

ಶ್ರೀ ಡಾ.ಗುರುಲಿಂಗ ಸ್ವಾಮೀಜಿ ಅಕ್ಕಿಮಠ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ನಾಗಭೂಷಣ ಸ್ವಾಮೀಜಿ ಸ್ವಾಗತಿಸಿದರು. ಭೀಮನಗೌಡ ವಂದಿಸಿದರು. ಅಮರಯ್ಯ ಸ್ವಾಮಿ ನಿರೂಪಣೆ ಮಾಡಿದರು. ಇದಕ್ಕೂ ಮುನ್ನ ೫೦೦ಕ್ಕೂ ಹೆಚ್ಚು ಸುಮಂಗಲೆಯರಿAದ ಪೂರ್ಣಕುಂಭ ಹೊತ್ತ ಮೆರವಣಿಗೆ ನಡೆಯಿತು.