ಹುಮನಾಬಾದ್: ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸ ಕನ್ನಡ ಭಾಷೆಗಿದೆ. ಪ್ರಾಚೀನ ಇತಿಹಾಸ ಹೊಂದಿರುವ ಕನ್ನಡ ಭಾಷೆ ಇಡೀ ವಿಶ್ವದಲ್ಲೇ ಶ್ರೀಮಂತವಾಗಿದ್ದು , ನಾವೆಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.
ಹಳ್ಳಿಖೇಡ (ಬಿ)ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಹಲವಾರು ಭಾಷೆಗಳಿದ್ದರೂ ಸಾಹಿತ್ಯದಲ್ಲಿ ಶ್ರೇಷ್ಠವಾದ ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ಬಂದಿವೆ. ಇದು ಕನ್ನಡದ ಸಾಹಿತ್ಯದ ಶ್ರೇಷ್ಠತೆ ತೋರಿಸುತ್ತದೆ. ಅನೇಕ ಮಹಾತ್ಮರನ್ನು ಕೊಟ್ಟಂತಹ ನಾಡು ನಮ್ಮದು. ಕನ್ನಡ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳಸುವಂತಹ ಜವಾಬ್ದಾರಿ ಸಮಸ್ತ ಕನ್ನಡಿಗರ ಮೇಲಿದೆ ಎಂದು ಹೇಳಿದರು.
ಕನ್ನಡದ ಬೆಳವಣಿಗೆ ಕನ್ನಡ ಪರ ಸಂಘಟನೆಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸದಾ ಹೋರಾಟ ಮಾಡುತ್ತಾ ಬಂದಿದೆ, ಅದರಲ್ಲಿ ವಿಶೇಷವಾಗಿ ತಾಲೂಕಿನ ಕರ್ನಾಟಕ ರಕ್ಷಣ ವೇದಿಕೆಯ ಪದಾಧಿಕಾರಿಗಳು ಒಳ್ಳೆಯ ಕಾರ್ಯ ಮಾಡುತ್ತಿದ್ದು, ಹೀಗೆ ಮುಂದುವರೆಸಲಿ ಎಂದು ಹೇಳಿದರು.
ಮಾಜಿ ಶಾಸಕ ಸುಭಾಷ ಕಲ್ಲೂರ ಮಾತನಾಡಿ, ಕನ್ನಡ ನಾಡು, ನುಡಿ ರಕ್ಷಣೆಗಾಗಿ ನಾವೆಲ್ಲರೂ ಸದಾ ಸಿದ್ಧವಿರಬೇಕು. ಕನ್ನಡಮ್ಮನ ಸೇವೆಗೆ ಶ್ರಮಿಸೋಣ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಸೊಂತ ಆಶ್ರಮದ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜರು ಆಶೀರ್ವಚನ ನೀಡಿದರು.
ವೇದಿಕೆ ತಾಲೂಕು ಅಧ್ಯಕ್ಷ ವೀರೇಶ ರೆಡ್ಡಿ ಬೋತಗಿಕರ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಜಗದೇವಿ ಶಂಕೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಮುಖರಾದ ನಾಗಯ್ಯ ಸ್ವಾಮಿ, ಬ್ಯಾಂಕ್ ರೆಡ್ಡಿ, ಶಕೀಲ್, ಸಿದ್ದಲಿಂಗಪ್ಪ ನಿರ್ಣಾ, ಕಲ್ಲಪ್ಪ ಮಜಗೆ, ಗುಂಡಯ್ಯ ತೀರ್ಥ, ಮಹಾಂತಯ್ಯ ತೀರ್ಥ, ಮಲ್ಲಿಕಾರ್ಜುನ ಪ್ರಭಾ, ನಾಗರಾಜ ಹಿಬಾರೆ, ದೇವರಾಜ ಪ್ರಭಾ, ಶಶಿಕಾಂತ ಶಿಲವಂತ, ಚಂದ್ರಶೇಖರ ಪಾಟೀಲ್ ಇತರರಿದ್ದರು.