ಜಿಲ್ಲೆ

ವಿಶ್ವದಲ್ಲಿಯೇ ಭಗವದ್ಗೀತೆ ಶ್ರೇಷ್ಠ ಗ್ರಂಥ

ಹುಬ್ಬಳ್ಳಿ: ವಿಶ್ವದಲ್ಲಿಯೇ ಭಗವದ್ಗೀತೆಯಂಥ ಶ್ರೇಷ್ಠ ಗ್ರಂಥ ಇನ್ನೊಂದಿಲ್ಲ. ಜ್ಞಾನಕ್ಕೆ ಇನ್ನೊಂದು ಹೆಸರೇ ಭಗವದ್ಗೀತೆ. ಈ ಗ್ರಂಥ ನಿತ್ಯ ಪಠಣ ಮಾಡುವುದರಿಂದ ಮನುಷ್ಯನ ಜೀವನ ಮತ್ತು ವ್ಯಕ್ತಿತ್ವ ದಲ್ಲಿ ಸಮಗ್ರ ಬದಲಾವಣೆ ಆಗಲಿದೆ ಎಂದು ಹುಬ್ಬಳ್ಳಿಯ ಚಿನ್ಮಯ ಮಿಷನ್ ಕೇಂದ್ರದ ಆಚಾರ್ಯ ಕೃತಾತ್ಮಾನಂದ ಸ್ವಾಮೀಜಿ ಹೇಳಿದರು.

ಗೀತಾ ಜಯಂತಿ ನಿಮಿತ್ತ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಆಶ್ರಯದಲ್ಲಿ ನಗರದ ಹವ್ಯಕ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಗೀತಾ ಸಮರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೀತೆಯ ಭಾಷೆ ಸುಲಭವಾಗಿ ತಿಳಿಯುವಷ್ಟು ಸರಳವಾಗಿದ್ದರೂ ಆಳವಾದ ಆಧ್ಯಾತ್ಮಿಕ ಜ್ಞಾನ ಅಡಕವಾಗಿದೆ ಎಂದರು.

ಭಗವದ್ಗೀತಾ ಅಭಿಯಾನದ ಕಾರ್ಯಾಧ್ಯಕ್ಷ ಎ.ಸಿ. ಗೋಪಾಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲ್ ಗುಮಾಸ್ತೆ ಸ್ವಾಮೀಜಿಯವರ ಪರಿಚಯ ಮಾಡಿದರು. ಕಾರ್ಯದರ್ಶಿ ಸುದರ್ಶನ್ ಜಿ.ಎಸ್. ವಂದಿಸಿದರು.

ಅಭಿಯಾನದ ಸಂಯೋಜಕಿ ಹಾಗೂ ಹವ್ಯಕ ಮಹಿಳಾ ಮಂಡಳದ ಅಧ್ಯಕ್ಷೆ ವೀಣಾ ಹೆಗಡೆ ಹಾಗೂ ಇತರ ಸದಸ್ಯರ ನೇತೃತ್ವದಲ್ಲಿ ಭಗವದ್ಗೀತಾ ಪಠಣ ನಡೆಯಿತು. ನೂರಾರು ಜನರು ಭಾಗವಹಿಸಿ ಭಗವದ್ಗೀತೆ ಪಠಣ ಮಾಡಿದರು. ಶ್ರೀಕಾಂತ ಹೆಗಡೆ, ಟಿ.ಎಸ್. ಭಟ್, ಸಂಯೋಜಕ ಮುತ್ತಗಿ, ಮನೋಹರ ಪರ್ವತಿ, ಸುರೇಶ ಹೆಗ್ಡೆ ಇತರರು ಇದ್ದರು.