Oplus_0 
ಜಿಲ್ಲೆ

ವಿಶ್ವದಲ್ಲಿ ಜಾಗತಿಕ ತಾಪಮಾನ ಏರಿಕೆ

ಯಳಂದೂರು: ತಾಲೂಕಿನ ಅಗರ ಗ್ರಾಮದ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆಯಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಾಂಬಳ್ಳಿ ವಲಯದ ವತಿಯಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಅರಣ್ಯ ಪಾಲಕ ಹರೀಶ್ ಮಾತನಾಡಿ, ಇಂದು ವಿಶ್ವದಲ್ಲಿ ಜಾಗತಿಕ ತಾಪಮಾನ ಏರುತ್ತಿದೆ. ಈ ವರ್ಷ ಭಾರತ ಸೇರಿದಂತೆ ಅನೇಕ ದೇಶಗಳು ಜಾಗತಿಕ ತಾಪಮಾನದ ಪರಿಣಾಮವನ್ನು ಎದುರಿಸಿವೆ. ಭಾರತದಲ್ಲೂ ದಾಖಲೆಯ ತಾಪಮಾನ ಈ ಬಾರಿ ದಾಖಲಾಗಿದ್ದು ಇದು ಮನುಷ್ಯ ಪ್ರಕೃತಿಯ ಮೇಲೆ ನಿರಂತರವಾಗಿ ನಡೆಸುತ್ತಿರುವ ದೌರ್ಜನ್ಯದ ಪ್ರತೀಕವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಕಾಡು ಕಡಿದು ನಗರ, ಪಟ್ಟಣಗಳನ್ನು ನಿರ್ಮಾಣ ಮಾಡುತ್ತಿರುವುದು, ಪರಿಸರಕ್ಕೆ ಮಾರಕವಾಗಿರುವ ವಸ್ತುಗಳನ್ನು ಬಳಕೆ ಮಾಡುತ್ತಿರುವುದು ನಿಲ್ಲಬೇಕು ಎಂದು ಹೇಳಿದರು.

ಪ್ಲಾಸ್ಟಿಕ್ ನಮ್ಮ ಪರಿಸರಕ್ಕೆ ಮಾರಕವಾಗಿದೆ. ಪರಿಸರ ಕಾಳಜಿ ನಮ್ಮ ಅಸ್ಮಿತೆಯಾಗಬೇಕು. ನಮ್ಮ ಕಾಡು, ಮನೆ, ಕಚೇರಿ, ಬೀದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು. ವನ್ಯ ಜೀವಿಗಳನ್ನು ಕೊಂದ ಮನುಷ್ಯನಲ್ಲಿ ವಿಕೃತ ಮನಸ್ಸಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಎಲ್ಲ ಜೀವಿಗಳು ಜೀವವೈವಿಧ್ಯತೆಯ ಸಂಕೇತವಾಗಿದೆ. ವನ್ಯಜೀವಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ಪ್ರತಿಯೊಬ್ಬರೂ ಗಿಡ ನೆಡಬೇಕು. ನೆಡದಿದ್ದರೂ ಇದನ್ನು ನಾಶ ಮಾಡುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು. ಮುಖ್ಯ ಶಿಕ್ಷಕಿ ಗಾಯತ್ರಿ, ಅರಣ್ಯ ಇಲಾಖೆಯ ರವಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಖಾ, ಕೃಷಿ ಮೇಲ್ವಿಚಾರಕ ಚಂದನ್ ಇದ್ದರು.