ಜಿಲ್ಲೆ

ವಿಶ್ವದ ಜನರ ಹೃದಯದಲ್ಲಿ ಬಸವಣ್ಣ ಚಿರಸ್ಥಾಯಿ

ಬಸವಕಲ್ಯಾಣ: ಸಮಾನತೆ ಸಂದೇಶ ನೀಡಿ ಕಾಯಕ, ದಾಸೋಹ ಕೊಟ್ಟು, ವಿಶ್ವಕ್ಕೆ ಮಾರ್ಗದರ್ಶನ ನೀಡಿ, ವಿಶ್ವದ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತವರು ಮಹಾತ್ಮ ಬಸವೇಶ್ವರರು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳೀದರು.

ನಗರದ ಸಸ್ತಾಪುರ ಬಂಗ್ಲಾದ ಸಮೀಪದ ಎಂ.ಎಂ.ಬೇಗ್ ಸಭಾಮಂಟಪದ ಆವರಣದಲ್ಲಿ ಸ್ವಾಭಿಮಾನಿ ಕಲ್ಯಾಣ ಪರ್ವ ಶನಿವಾರ ಉದ್ಘಾಟಿಸಿ, ಆಶೀರ್ವಚನ ನೀಡಿ, ಕಲ್ಯಾಣದಲ್ಲಿ ಅನೇಕ ಕಾರ್ಯಕ್ರಮ ನಡೆಯುತ್ತಿವೆ. ಭಕ್ತಿ- ಶ್ರದ್ಧೆಯಿಂದ ಬಸವ ತತ್ವ ಪ್ರಚಾರ-ಪ್ರಸಾರ ಮಾಡುವವರಿಗೆ ಹಾರಕೂಡ ಮಠದ ಸಹಕಾರ ಸದಾ ಇರಲಿದೆ ಎಂದರು.

ಕಲ್ಯಾಣದಲ್ಲಿ ಬಸವೇಶ್ವರರ ಧ್ಯಾನ ಮಾಡಿ ಇಲ್ಲಿಯ ಮಣ್ಣು ಹಣೆಗೆ ಹಚ್ಚಿಕೊಂಡರೆ ಎಲ್ಲ ಕಷ್ಟ ದೂರಾಗಿ ನೆಮ್ಮದಿ ಸಿಗುತ್ತದೆ. ಬಸವ ತತ್ವದ ಮಾರ್ಗದಲ್ಲಿ ನಡೆದ ಲಿಂಗಾನಂದ ಸ್ವಾಮೀಜಿ ಪ್ರವಚನ ಪಿತಾಮಹರಾಗಿ ದೇಶಾದ್ಯಂತ ಪ್ರವಚನದ ಮೂಲಕ ಪಸರಿಸಿದ್ದಾರೆ. ಅವರನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಉತ್ಸವ ಸಮಿತಿ ಅಧ್ಯಕ್ಷ ಶ್ರೀ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಯಾರದೋ ಜತೆ ಸ್ಪರ್ಧೆ ಮಾಡಲು ಸ್ವಾಭಿಮಾನಿ ಕಲ್ಯಾಣ ಪರ್ವ ಮಾಡುತ್ತಿಲ್ಲ. ಧರ್ಮ ಪ್ರಚಾರಕ್ಕೆ ಪದವಿ ಆಸ್ತಿ ಅಗತ್ಯವಿಲ್ಲ. ಪೂಜ್ಯ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಅವರ ಮಾರ್ಗದಲ್ಲಿ ಸಾಗುತ್ತೇವೆ ಎಂದರು.

ಶರಣ ಸೇವಾರತ್ನ ಪ್ರಶಸ್ತಿ ಸ್ವೀಕರಿಸಿದ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ, ಬಸವ ತತ್ವ ಪ್ರತಿಯೊಬ್ಬರೂ ಅರಿಯಬೇಕು ಎಂದರು. ಬಸವ ಧ್ವಜಾರೋಹಣ ನೆರವೇರಿಸಿದ ಕಾಂಗ್ರೆಸ್ ಮುಖಂಡರಾದ ಧನರಾಜ ತಾಳಂಪಳ್ಳಿ, ತೆಲಂಗಾಣಾದ ಕಾಂಗ್ರೆಸ್ ಮುಖಂಡ ಟಿ. ಸಂಗಮೇಶ್ವರ ಮಾತನಾಡಿದರು. ಸಾಧಕರಾದ ಚಿನ್ಮಯ ಅಳ್ಳಿ, ಹಾಗೂ ಗ್ರಂಥ ದಾಸೋಹಿಗಳನ್ನು ಸನ್ಮಾನಿಸಲಾಯಿತು.

ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಖೇಳಗಿಯ ಶ್ರೀ ಶಿವಲಿಂಗ ಸ್ವಾಮೀಜಿ, ಪೂಜ್ಯ ಮಾತೆ ಸತ್ಯಾದೇವಿ, ಪೂಜ್ಯ ಪ್ರಭುಲಿಂಗ ಸ್ವಾಮೀಜಿ, ಪೂಜ್ಯ ಶಾಂತಾದೇವಿ ಮಾತಾಜಿ, ಪೂಜ್ಯ ಅಕ್ಕನಾಗಲಾಂಬಿಕಾ ಮಾತಾಜಿ, ಸಂಗಮೇಶ್ವರ, ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ ಬೆಂಡಿಗೇರಿ, ಪ್ರಮುಖರಾದ ಗುರಮ್ಮ ಸಿದ್ಧಾರೆಡ್ಡಿ, ಅರ್ಜುನ ಕನಕ, ಮಲ್ಲಿನಾಥ ಹಿರೇಮಠ, ಚಿಕ್ಕಮಗಳೂರಿನ ಬಾಣೂರ ಚೆನ್ನಪ್ಪ, ಶಿವಮೊಗ್ಗದ ಬಾಣೂರ ಹಿರಣ್ಣಯ್ಯ, ಕಲ್ಲಪ್ಪ ದೇಶಮುಖ, ಶಿವರಾಜ ಪಾಟೀಲ್ ಅತಿವಾಳ, ಬಸವರಾಜ ಪಾಟೀಲ್ ಶಿವಪುರ, ಹಾವಶೆಟ್ಟಿ ಪಾಟೀಲ್ ಇತರರಿದ್ದರು.