ಮೈಸೂರು: ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿರುವ ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ.ಬಸವಯ್ಯ ಕನಕಪುರ ಸ್ಥಾನ ಪಡೆದಿದ್ದಾರೆ.
ವಿವಿಧ ಕ್ಷೇತ್ರಗಳ ವಿಜ್ಞಾನಿಗಳಿರುವ ಈ ಪಟ್ಟಿಯಲ್ಲಿ ಇವರು 1,671ನೇ ರ‌್ಯಾಂಕ್‌ಗೆ ಭಾಜನರಾಗಿದ್ದಾರೆ. ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ ಕ್ಷೇತ್ರದಲ್ಲಿನ ಇವರ ಸಾಧನೆ ಗುರುತಿಸಲಾಗಿದೆ. ಇವರು ಭಾರತದ ಒಟ್ಟು 13 ವಿಶ್ಲೇಷಣಾ ರಸಾಯನಶಾಸ್ತ್ರ ಸಂಶೋಧಕರಲ್ಲಿ 12ನೇ ವಿಜ್ಞಾನಿ.
ರಾಜ್ಯದ ಸಾಂಪ್ರದಾಯಿಕ ವಿವಿಗಳಿಂದ ಅಗ್ರ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 4 ಪ್ರಾಧ್ಯಾಪಕರಲ್ಲಿ ಇವರು 2ನೇ ಸ್ಥಾನದಲ್ಲಿ ಇದ್ದಾರೆ. ಈವರೆಗೆ 550 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಈ ರ‌್ಯಾಂಕ್‌ಗಾಗಿ ಅವರ 264 ಸಂಶೋಧನಾ ಪ್ರಬಂಧಗಳನ್ನು ಪರಿಗಣಿಸಲಾಗಿದೆ. ಈ ಪಟ್ಟಿಯಲ್ಲಿರುವ ವಿಜ್ಞಾನಿಗಳ ಪೈಕಿ ಭಾರತದ ಅಗ್ರ ವಿಜ್ಞಾನಿಗಳ ಪಾಲು ಕೇವಲ ಶೇ.2ರಷ್ಟಿದೆ.
ಇವರು ಮೊದಲು ನಗರದ ಪ್ರಾದೇಶಿಕ ಶಿಕ್ಷಣ ಕಾಲೇಜು(ಆರ್‌ಐಇ) ಮತ್ತು ಯುವರಾಜ ಕಾಲೇಜಿನಲ್ಲಿ ಬೋಧನಾ ಕಾರ್ಯ ನಿರ್ವಹಿಸಿದ್ದರು. ಬಳಿಕ ಮೈವಿವಿ ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಇವರು ಆರು ವರ್ಷ ಹಿಂದೆ ನಿವೃತ್ತರಾಗಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಯನ್ನು ಗುರುತಿಸಿ ನವದೆಹಲಿಯ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಪ್ರತಿಷ್ಠಿತ ಬಿಎಸ್‌ಆರ್ ಅಧ್ಯಾಪಕರ ಫೆಲೋಶಿಪ್ ನೀಡಿತ್ತು. ಕನಕಪುರ ಮೂಲದ ಇವರು ಮೈಸೂರಿನ ರಾಮಕೃಷ್ಣನಗರದ ಎಚ್-ಬ್ಲಾಕ್‌ನಲ್ಲಿ ವಾಸವಾಗಿದ್ದಾರೆ.
ಈ ಪಟ್ಟಿಯಲ್ಲಿ ಸಾವಯವ ರಾಸಾಯನ ಕ್ಷೇತ್ರದಿಂದ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊಕೆ.ಎಸ್.ರಂಗಪ್ಪ ಅವರು 2,181ನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ.