ಚಿತ್ರದುರ್ಗ: ವಿಶ್ವಗುರು ಬಸವಣ್ಣ ಇಡೀ ಮಾನವ ಕುಲದ ಆಸ್ತಿ. ಅವರನ್ನು ಜಾತಿಗೆ ಸೀಮಿತಗೊಳಿಸಿದರೆ, ವೈಚಾರಿಕ ಹೋರಾಟ ಅವಮಾನಿಸಿದಂತೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.
ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ವಿಶ್ವಗುರು ಬಸವಣ್ಣ ಅವರ ಜಯಂತಿಯಲ್ಲಿ ಮಾತನಾಡಿದರು.
ಕುಂಬಾರ, ಅಗಸ, ಬಡಿಗಿ, ನೇಕಾರ, ಮಾದಿಗ, ಬಣಜಿಗ, ಮೇದಾರ ಹೀಗೆ ನೂರಾರು ಜಾತಿಯ ಶ್ರಮಜೀವಿಗಳನ್ನು ಹಾಗೂ ಸ್ತ್ರೀಯರನ್ನು ಒಳಗೊಂಡು ಸ್ಥಾಪಿತವಾದ ಲಿಂಗಾಯತ ಧರ್ಮವಿಂದು ಶ್ರಮಿಕರಿಂದ ದೂರವಾಗುತ್ತಿದೆ ಎಂದು ಬೇಸರಿಸಿದರು.
ಕರ್ಮ ಸಿದ್ದಾಂತ ಧಿಕ್ಕರಿಸಿ, ಶ್ರಮ ಸಂಸ್ಕೃತಿ ಗೌರವಿಸಿದ್ದ ಬಸವಣ್ಣ ಸ್ವರ್ಗ-ನರಕದ ಕಲ್ಪನೆ ತಿರಸ್ಕರಿಸಿದ್ದರು. ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಆರ್ಥಿಕ ಸಮಾನತೆ ಸಾಧ್ಯವೆಂದು ಪ್ರತಿಪಾದಿಸಿದ್ದರು. ಅವರ ತತ್ವಾದರ್ಶ ಅನುಸರಿಸಿದರೆ ಸಮಾಜದ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕ ಪಕೀರಪ್ಪ ಮಾತನಾಡಿ ಭಗವಾನ್ ಬುದ್ಧ ದೇವರ ಭಯ ತೊಲಗಿಸಲು ವೈಜ್ಞಾನಿಕ ಧಮ್ಮ ನೀಡಿದ್ದರೆ, ಬಸವಣ್ಣ ಮಿದುಳಿನ ಚಿಂತನೆಗೆ ಹಾಕಿದ್ದ ಬೇಡಿಯನ್ನು ಬಿಡಿಸಲು ಇಷ್ಟಲಿಂಗ ನೀಡಿದ ಮಹಾನುಭಾವರು ಎಂದು ಬಣ್ಣಿಸಿದರು.
ಪ್ರಾಚಾರ್ಯೆ ಜೆ.ಸಿದ್ದಲಿಂಗಮ್ಮ, ಬಿಎಸ್‌ಪಿ ಅಧ್ಯಕ್ಷ ಕೆ.ಪ್ರಕಾಶ್, ಪ್ರೊ.ಕರಿಬಸಪ್ಪ, ಬುರುಜನರೊಪ್ಪ ಹನುಮಂತಪ್ಪ, ಅಭಿಲಾಶ್, ಬಿ.ಪಿ.ಪ್ರೇಮನಾಥ್, ವಕೀಲ ಚಂದ್ರಪ್ಪ, ಬೆಸ್ಕಾಂ ತಿಪ್ಪೇಸ್ವಾಮಿ ಇತರರಿದ್ದರು.