ಬೀರೂರಿನ ಮಹಾನವಮಿ ಬಯಲಿನಲ್ಲಿ ದಶರಥ ಪೂಜಾರ್ ಅವರು ದೊಡ್ಡಬಿಲ್ಲಪ್ಪನನ್ನೇರಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿದರು. 
ಜಿಲ್ಲೆ

ವಿಶ್ವಕ್ಕೆ ಶಾಂತಿಯ ಭಂಗವಾಯಿತು

ಬೀರೂರು: ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಧರ್ಮ-ಅಧರ್ಮ ಸಂಕಷ್ಟವಾಯಿತು, ವಿಶ್ವಕ್ಕೆ ಶಾಂತಿಯ ಭಂಗವಾಯಿತು. ಧರೆಗೆ ವರುಣನ ಆಗಮನವಾಯಿತು. ಸರ್ವರೂ ಎಚ್ಚರಿಂದಿಂದಿರಬೇಕಲೇ ಪರಾಕ್. ಇದು ಈ ಬಾರಿಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಅರ್ಚಕ ದಶರಥ ಪೂಜಾರ್ ಅವರ ಕಾರ್ಣಿಕ ನುಡಿಮುತ್ತುಗಳು.

ಪಟ್ಟಣದ ಸರಸ್ವತಿಪುರಂ ಬಡಾವಣೆ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯು ಮಹಾನವಮಿ ಬಯಲಿನಲ್ಲಿ ಶುಕ್ರವಾರ ಮುಂಜಾನೆ 4.33ಕ್ಕೆ ನಡೆದ ಕಾರ್ಣಿಕೋತ್ಸವದಲ್ಲಿ ಕಾರ್ಣಿಕ ನುಡಿಯಲಾಯಿತು. ಮಂಗಳವಾರ ಗಂಗಾಪೂಜೆ, ರುದ್ರಾಭಿಷೇಕ, ಗಣಹೋಮ, ಪ್ರಧಾನ ಮಲ್ಲಾರಿಹೋಮ, ಮಹಾಮಂಗಳಾರತಿ ಹಾಗೂ ಸಂಜೆ ಶ್ರೀ ಸ್ವಾಮಿಯನ್ನು ಪಟ್ಟಕ್ಕೆ ಕೂರಿಸಲಾಯಿತು. ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬುಧವಾರ ಆಯುಧಪೂಜೆ ಹಿನ್ನ್ನೆಲೆಯಲ್ಲಿ ಹೂವಿನ ವಿಶೇಷ ಅಲಂಕಾರ, ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಿತು. ಗುರುವಾರ ರಾತ್ರಿ 8ಕ್ಕೆ ಪುಷ್ಪಾಲಂಕಾರದೊಂದಿಗೆ ಮೈಲಾರಲಿಂಗಸ್ವಾಮಿಯನ್ನು ಗಾಳಿಹಳ್ಳಿ ಸಮೀಪದ ಪಾದದಕೆರೆಗೆ ಪಲ್ಲಕ್ಕಿಯಲ್ಲಿ ಹೋಗಿ ಬನ್ನಿ ಮುಡಿದು ನಂತರ 101 ಗಣಂಗಳ ಪೂಜೆ ನೆರವೇರಿಸಲಾಯಿತು.

ಬನ್ನಿ ಮುಡಿದು ಸಂಪಿಗೆ ಹೂವಿನ ಅಲಂಕಾರದಲ್ಲಿ ಪಲ್ಲಕ್ಕಿಯಲ್ಲಿ ಮಹಾನವಮಿ ಬಯಲಿಗೆ ಹೊರಟ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೊಡ್ಡ ಬಿಲ್ಲಪ್ಪನನ್ನು ಜತೆಯಲ್ಲಿಯೇ ಕರೆದು ತರಲಾಯಿತು. ಮೊದಲೇ ಹಾಜರಿದ್ದ ಶ್ರೀ ವೀರಭದ್ರಸ್ವಾಮಿ, ಶ್ರೀ ಹುಲುಬೆಂಕಿ ಬೀರಲಿಂಗೇಶ್ವರ ಸ್ವಾಮಿ, ಹಿರಿಯಂಗಳ ವೀರಭದ್ರಸ್ವಾಮಿ ಅವರನ್ನು ಪ್ರದಕ್ಷಿಣಿ ಹಾಕಿದ ಕೂಡಲೇ ಜತೆಯಲ್ಲಿದ್ದ ದೊಡ್ಡ ಬಿಲ್ಲಪ್ಪ ನಿಗದಿತ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. 4.30ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ವ್ರತದಲ್ಲಿದ್ದ ದಶರಥ ಪೂಜಾರ್ ಅವರನ್ನು ಕರೆದುಕೊಂಡು ಬಂದಾಗ ಸ್ಥಾಪಿತವಾಗಿದ್ದ ಬಾಣಪ್ಪನನ್ನು ಏರಿ ಗಂಟೆಯ ಸದ್ದು ಮೊಳಗಿಸಿದ ಕೂಡಲೇ ಮೈದಾನದಲ್ಲಿ ನೀರವ ಮೌನ ಆವರಿಸಿತು. ದಶರಥ ಪೂಜಾರ್ ಎಣ್ಣೆ ಮತ್ತು ಸಂಪಿಗೆ ಹೂಗಳಿಂದ ಅಲಂಕರಿಸಿದ್ದ ದೊಡ್ಡ ಬಿಲ್ಲಪ್ಪನನ್ನು ಏರಿ ಬಾಣವನ್ನು ತೂಗಿ ಕೈಬಿಟ್ಟು ಕ್ಷಣಕಾಲ ಮೌನಕ್ಕೆ ಜಾರಿದರು. ನಂತರ ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ಧರ್ಮ-ಅಧರ್ಮ ಸಂಕಟವಾಯಿತು. ವಿಶ್ವಕ್ಕೆ ಶಾಂತಿ ಭಂಗವಾಯಿತು. ಧರೆಗೆ ವರುಣನ ಆಗಮನವಾಯಿತು. ಸರ್ವರೂ ಎಚ್ಚರಿಂದಿಂದಿರಬೇಕಲೇ ಪರಾಕ್ ಎಂದು ನುಡಿದು ದೊಡ್ಡ ಬಿಲ್ಲಪ್ಪನಿಂದ ಜಾರಿದರು. ತಕ್ಷಣ ನೆರೆದಿದ್ದ ಭಕ್ತರು ಏಳುಕೋಟಿ, ಏಳುಕೋಟಿ, ಚಾಂಗಮಲೋ ಎಂದು ಘೋಷಣೆಗಳನ್ನು ಕೂಗುತ್ತ ದಶರಥ ಪೂಜಾರ್ ಅವರನ್ನು ಹೊತ್ತೊಯ್ದರು.

ಶ್ರೀ ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿಗಳನ್ನು ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ದೇಶದ ಭವಿಷ್ಯವಾಗಿ ವಿಶ್ಲೇಷಿಸಿಕೊಳ್ಳುವ ಜನತೆ, ಈ ನುಡಿಗಳನ್ನು ವಾರ್ಷಿಕ ಭವಿಷ್ಯ ನುಡಿ ಹಾಗೂ ಸತ್ಯವೆಂದು ನಂಬಿದ್ದಾರೆ. ಶುಕ್ರವಾರ ಸಂಜೆ ಶ್ರೀ ಸ್ವಾಮಿಯವರ ದೋಣಿಸೇವೆ ಹಾಗೂ ಶನಿವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೈಲಾರಲಿಂಗಸ್ವಾಮಿಯ ಉತ್ಸವದೊಂದಿಗೆ ತೆರೆಬೀಳಲಿದೆ.