ಬಸವಕಲ್ಯಾಣದ ಎಸ್‌ಎಸ್‌ಕೆ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಇತಿಹಾಸ ಮತ್ತು ಸಂಸ್ಕೃತಿ ವಿಷಯ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಡಾ.ಬಸವರಾಜ ಎವಲೆ, ಡಾ.ವೀರಶೆಟ್ಟಿ ಗಾರಂಪಳ್ಳಿ, ಡಾ. ಚಂದ್ರಶೇಖರ ಬಿರಾದಾರ್, ಡಾ.ಭೀಮಶಂಕರ ಬಿರಾದಾರ್, ಡಾ.ಶಿವಕುಮಾರ್ ಪಾಟೀಲ, ಪ್ರೊ.ವಿಟೋಬಾ ದೊಣ್ಣೆಗೌಡರ, ಲಕ್ಷ್ಮೀಬಾಯಿ ಭಂಕೂರ, ಕಲ್ಯಾಣಪ್ಪ ನವದಗಿ, ಭಾರತಿ ಮಠ, ವೈಶಾಲಿ ಎಚ್. ಇದ್ದರು. 
ಜಿಲ್ಲೆ

ವಿಶ್ವಕ್ಕೆ ವಚನ ಸಾಹಿತ್ಯ ನೀಡಿದ ನೆಲ ಕಲ್ಯಾಣ

ಬಸವಕಲ್ಯಾಣ: ವಿಶ್ವಕ್ಕೆ ವಚನ ಸಾಹಿತ್ಯ ನೀಡಿದ ನೆಲ ಕಲ್ಯಾಣ ಎಂದು ಕಲಬುರಗಿ ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಡಾ.ವೀರಶೆಟ್ಟಿ ಗಾರಂಪಳ್ಳಿ ಹೇಳಿದರು.

ನಗರದ ಎಸ್‌ಎಸ್‌ಕೆ ಬಸವೇಶ್ವರ ಕಲಾ ವಿಜ್ಞಾನ ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ಇತಿಹಾಸ ವಿಭಾಗ ಮತ್ತು ಕಲಬುರಗಿ ವಿಭಾಗೀಯ ಪತ್ರಾಗಾರ ಕಚೇರಿ ಸಹಯೋಗದಲ್ಲಿ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ಬಸವಕಲ್ಯಾಣ ಇತಿಹಾಸ ಮತ್ತು ಸಂಸ್ಕೃತಿ ವಿಷಯ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣಕ್ಕೆ ತಮ್ಮದೇ ಆದ ಇತಿಹಾಸವಿದೆ ಎಂದು ಹೇಳಿದರು.

ಬೀದರ್‌ನ ಇತಿಹಾಸ ಪ್ರಾರಂಭವಾಗುವುದೇ ಬಸವಕಲ್ಯಾಣದ ಮೋರಖಂಡಿ ಗ್ರಾಮದಿಂದ. ಹತ್ತನೇ ಶತಮಾನದಲ್ಲಿ ಒಂದನೇ ಸೋಮೇಶ್ವರನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ್ದನೆಂದು ಇತಿಹಾಸದಿಂದ ತಿಳಿದು ಬರುತ್ತದೆ. ೧೨ನೇ ಶತಮಾನದಲ್ಲಿ ಕಲ್ಯಾಣ ಕುರಿತು ಬಸವಣ್ಣವರು, ಅಲ್ಲಮಪ್ರಭು, ಚನ್ನಬಸವಣ್ಣ ಹಾಗೂ ಬಸವಾದಿ ಶರಣರು ತಮ್ಮ ವಚನಗಳಲ್ಲಿ ಚರ್ಚಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಎವಲೆ ಮಾತನಾಡಿ, ವಚನಗಳಲ್ಲಿ ಜಾಗತಿಕ ಮೌಲ್ಯಗಳು ಅಡಗಿವೆ. ಬಸವಾದಿ ಶರಣರು ವಚನಗಳ ಮೂಲಕ ಕಾಯಕ, ದಾಸೋಹ, ಸಮಾನತೆ ಸಂದೇಶ ಸಾರಿದ್ದಾರೆ. ಹೀಗಾಗಿ ಕಲ್ಯಾಣ ಕ್ಷೇತ್ರ ಇಡೀ ಜಗತ್ತಿನಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು.

ಹತ್ತನೇ ಶತಮಾನದಲ್ಲಿ ರಾಷ್ಟ್ರಕೂಟರು, ನಂತರದಲ್ಲಿ ಚಾಲುಕ್ಯರು ಆಳ್ವಿಕೆ ಮಾಡಿದ್ದು, ಈ ನಾಡು ಅನೇಕ ಅರುಸು ಮನೆತನದಿಂದ ಆಳ್ವಿಕೆಗೆ ಒಳಪಟ್ಟಿದ್ದರಿಂದ ಇಲ್ಲಿ ವಿವಿಧತೆಯಲ್ಲಿ ಏಕತೆ ಕಾಣುತ್ತದೆ. ಕಾರ್ಯಾಗಾರದ ಬಗ್ಗೆ ತಿಳಿದುಕೊಳ್ಳುವುದರ ಜತೆಗೆ ಸ್ಥಳೀಯ ಇತಿಹಾಸದ ಕುರಿತು ಅಧ್ಯಯನ ಮಾಡುವುದು ಮುಖ್ಯವಾಗಿದೆ ಎಂದರು.

ಮೊದಲ ಗೋಷ್ಠಿಯಲ್ಲಿ ಭಾಲ್ಕಿಯ ನಿವೃತ್ತ ಸಹ ಪ್ರಾಧ್ಯಾಪಕ ಡಾ. ಚಂದ್ರಶೇಖರ ಬಿರಾದಾರ ಮಾತನಾಡಿದರು. ಕಲ್ಯಾಣಪ್ಪ ನವದಗಿ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕ ಡಾ.ಶಿವಕುಮಾರ ಪಾಟೀಲ್ ವಂದಿಸಿದರು ಭೀಮಾಶಂಕರ ಪೂಜಾರಿ ನಿರೂಪಣೆ ಮಾಡಿದರು. ರಾಜಶ್ರೀಪ್ರಾರ್ಥನ ಗೀತೆ ಹಾಡಿದರು.

ಪ್ರತಿಯೊಬ್ಬರೂ ಇತಿಹಾಸ ತಿಳಿಯುವುದು ಅಗತ್ಯ: ಇತಿಹಾಸ ಓದದವರು ಇತಿಹಾಸ ಸೃಷ್ಟಿಸಲಾರರು. ಸ್ಥಳೀಯ ಇತಿಹಾಸ ಎಲ್ಲಿಯವರೆಗೆ ಅಧ್ಯಯನ ಮಾಡುವುದಿಲ್ಲವೋ ಅಲ್ಲಿಯವರೆಗೆ ದೇಶದ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಬೀದರ್‌ನ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಶಿವಕುಮಾರ ಉಪ್ಪೆ ಹೇಳದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಲ್ಯಾಣದ ಇತಿಹಾಸ, ಗತ ವೈಭವ, ಸಾಂಸ್ಕೃತಿಕ ಶ್ರೀಮಂತಿಕೆ ಕುರಿತು ಮಾಹಿತಿ ನೀಡಿ, ಪ್ರತಿಯೊಬ್ಬರೂ ಇತಿಹಾಸದ ಕುರಿತು ತಿಳಿದುಕೊಳ್ಳುವದು ಅತ್ಯಾವಶ್ಯಕ ಎಂದರು.

ಡಾ.ಶಿವಕುಮಾರ ಪಾಟೀಲ್ ಸ್ವಾಗತಿಸಿದರು. ಮಹದೇವ ನಿರೂಪಣೆ ಮಾಡಿದರು. ಡಾ.ಭೀಮಶಂಕರ ಬಿರಾದಾರ್, ಪ್ರಾಧ್ಯಾಪಕರಾದ ವಿಠೋಬಾ ಡೊಣ್ಣೆಗೌಡರ್, ರಮೇಶ ಕೆ.ಸಿ., ಡಾ.ಸುರೇಶ ಎಚ್.ಆರ್., ಲಕ್ಷ್ಮೀ ಭಂಕೂರ, ಗ್ರಂಥಪಾಲಕ ಸೂರ್ಯಕಾಂತ ನಾಸೆ, ಶಿವಕುಮಾರ ಕೊಲ್ಲೆ, ಭಾರತಿ ಮಠ. ಶರಣು ಮಠಪತಿ. ಶಿಲ್ಪಾ ಬಿರಾದಾರ್. ಸುಮನ ರೆಡ್ಡಿ ಇತರರಿದ್ದರು. ೨ನೇ ಗೋಷ್ಠಿಯಲ್ಲಿ ಪತ್ರಗಾರ ಇಲಾಖೆ ಹಿರಿಯ ಸಹಾಯಕ ನಿದೇರ್ಶಕ ಡಾ.ವೀರಶೆಟ್ಟಿ ಗಾರಂಪಳ್ಳಿ ಕಲ್ಯಾಣ ಇತಿಹಾಸ ಮತ್ತು ಸಂಸ್ಕೃತಿ ಕುರಿತು ಉಪನ್ಯಾಸ ಮಂಡಿಸಿದರು.