ಜಿಲ್ಲೆ

ವಿಶ್ವಕರ್ಮರ ಸೇವೆ ಸ್ಮರಣೀಯ

ಹಾಸನ: ಪ್ರಪಂಚವೇ ಆಶ್ಚರ್ಯಪಡುವ ರೀತಿಯಲ್ಲಿ ವಾಸ್ತುಶಿಲ್ಪ ಕೆತ್ತನೆ ಮೂಲಕ ಭಾರತದ ಹಿರಿಮೆ ಹೆಚ್ಚಿಸಿದ ವಿಶ್ವಕರ್ಮರ ಸೇವೆಯನ್ನು ಎಲ್ಲರೂ ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೂರಾರು ವರ್ಷಗಳ ಹಿಂದೆ ರಚನೆಯಾದ ಕಲಾಕೃತಿಗಳು ಇಂದಿಗೂ ಸೂಜಿಗಲ್ಲಿನಂತೆ ಸೆಳೆಯುತ್ತಿವೆ ಎಂದರೆ ವಿಶ್ವಕರ್ಮರ ಕಾರ್ಯಕ್ಷಮತೆ ಬಗ್ಗೆ ಯೋಚಿಸಬೇಕಾಗುತ್ತದೆ. ಯಾವುದೇ ತಂತ್ರಜ್ಞಾನಗಳ ನೆರವಿಲ್ಲದೆ ರೂಪುಗೊಂಡ ಶಿಲ್ಪ ಕಲೆಯ ಮಹತ್ವವನ್ನು ಅರಿಯಬೇಕು ಎಂದರು.

ವಿಶ್ವಕರ್ಮ ಸಮಾಜ ಅಭಿವೃದ್ಧಿಗೆ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಿದ್ದು, ಯೋಜನೆಗಳ ಲಾಭ ಪಡೆಯಬೇಕು. ವಿಶ್ವಕರ್ಮರು ಎಂದರೆ ದೈವಶಕ್ತಿ ಹೊಂದಿದವರು ಹಾಗೂ ದೇವತೆಗಳಿಗೆ ಸ್ವರ್ಗ ಕಟ್ಟಿದವರು. ಕಬ್ಬಿಣ, ಮರ, ತಾಮ್ರ, ಬೆಳ್ಳಿ, ಚಿನ್ನದಂತಹ ಸಾಮಗ್ರಿಗೆ ಸೌಂದರ್ಯ ತಂದುಕೊಡುವ ವಿಶೇಷ ಪ್ರತಿಭೆ ಇವರಲ್ಲಿದೆ. ಪ್ರಾಚೀನ ದಿನಗಳಲ್ಲಿ ಅಕ್ಕಸಾಲಿಗರನ್ನು ಮನೆಗೆ ಕರೆಸಿ ಒಡವೆ ಮಾಡಿಸಲಾಗುತಿತ್ತು. ಇಂದು ಅವರ ಮಳಿಗೆಗೆ ಭೇಟಿ ನೀಡುತ್ತಿದ್ದೇವೆ. ದಿನಕಳೆದಂತೆ ವ್ಯವಹಾರ ವಿಧಾನವೂ ಬದಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ಮಾತನಾಡಿ, ಯಾವುದೇ ಒಂದು ವಸ್ತುವನ್ನು ಕಲೆ ರೂಪಕ್ಕೆ ತರುವವರು ವಿಶ್ವಕರ್ಮರು ಎಂದರು.
ಸಮಾಜ ಮುಖಂಡ ರಾಘವಾಚಾರ್ ಮಾತನಾಡಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಜಿ.ಒ.ಮಹಾಂತಪ್ಪ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ವಿಶ್ವಕರ್ಮ ಸಮಾಜ ಜಿಲ್ಲಾಧ್ಯಕ್ಷ ಕುಮಾರ್, ತಾಲೂಕು ಅಧ್ಯಕ್ಷ ಕುಮಾರಾಚಾರ್, ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಹಾಗೂ ಇತರರಿದ್ದರು.