ಜಿಲ್ಲೆ

ವಿಶ್ವಕರ್ಮ ಸಮುದಾಯದ ಜತೆಗಿರುವೆ

ಶ್ರೀರಂಗಪಟ್ಟಣ: ವಿಶ್ವದ ನಾಗರಿಕತೆಯ ಮೂಲಪುರುಷನೇ ವಿಶ್ವಕರ್ಮನಾಗಿದ್ದು, ಸಂಸ್ಕೃತಿಯ ಸೃಷ್ಟಿಗೆ ಈ ವಿಶ್ವಕರ್ಮ ಸಮುದಾಯ ಜನರ ಕೊಡುಗೆ ಅಪಾರ. ಇಂತಹ ಸಮುದಾಯದ ಎಳ್ಗೆಗೆ ಸದಾ ಜತೆಗಿರುವೆ ಎಂದು ದಿ.ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಇಂಡುವಾಳು ಸಚ್ಚಿದಾನಂದ ತಿಳಿಸಿದರು.


ಪಟ್ಟಣದ ಕಾಳಮ್ಮನಗುಡಿ ರಸ್ತೆಯ ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯದ ಮುಂಭಾಗದಲ್ಲಿ ವಿಶ್ವಕರ್ಮ ಸಮುದಾಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ದೇಶದ ಬೆನ್ನೆಲುಬು ರೈತನ ಕೃಷಿಗೆ ಅಗತ್ಯ ಸಲಕರಣೆಗಳಿಂದ ಜನರ ಕಾಯುವ ಯೋಧನಿಗೆ ಬೇಕಾದ ಆಯುಧವನ್ನು ಕುಲುಮೆಯಲ್ಲಿ ಕುಳಿತು ತಯಾರಿಸುವ ಇವರ ಕಾರ್ಯ ಶ್ಲಾಘನೀಯ. ಇಂತಹ ನಶಿಸಿ ಹೋಗುತ್ತಿರುವ ಕುಲಕಸುಬು ಉಳಿವಿನ ಜತೆಗೆ ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸುವಂತಹ ಶಕ್ತಿ ಈ ಸಮುದಾಯಕ್ಕೆ ಸಿಗಬೇಕಿದೆ. ಹೀಗಾಗಿ ಕ್ಷೇತ್ರದ ವಿಶ್ವಕರ್ಮ ಸಮುದಾಯಕ್ಕೆ ನಮ್ಮ ಟ್ರಸ್ಟ್ ವತಿಯಿಂದ 5 ಲಕ್ಷ ರೂ. ಧನಸಹಾಯ ಜತೆಗೆ ಕಾಳಿಕಾಂಬ ದೇವಾಲಯ ಜೀರ್ಣೋದ್ಧಾರಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಮಾಡುವುದಾಗಿ ಪ್ರಕಟಿಸಿದರು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ವಿಶ್ವಕರ್ಮ ಮಹಿಳಾ ಘಟಕದ ಉಪಾಧ್ಯಕ್ಷೆ ಸುಧಾಮಣಿ ಮಾತನಾಡಿ, ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ನೀಡುವ ಜತೆಗೆ ಸಮುದಾಯದ ಮುಖಂಡ ಕೆ.ಪಿ.ನಂಜುಂಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.


ಇದಕ್ಕೂ ಮೊದಲು ಶ್ರೀವಿಶ್ವಕರ್ಮರ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಬೆಳ್ಳಿ ರಥದ ಮೆರವಣಿಗೆಗೆ ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ಚಾಲನೆ ನೀಡಿ ಪಟ್ಟಣದಲ್ಲಿ ಸಂಚಾರ ನಡೆಸಿತು. ಡೊಳ್ಳು ಕುಣಿತ, ಚರ್ಮವಾದ್ಯ ವೀರಗಾಸೆ, ಸಿದ್ದಪ್ಪಾಜಿ ಕಂಡಾಯ, ಕೀಲುಗೊಂಬೆ ಸೇರಿದಂತೆ ಇತರ ಜಾನಪದ ಕಲಾ ತಂಡ ಮೆರವಣಿಗೆಗೆ ಮೆರುಗು ನೀಡಿತು.


ಕಾರ್ಯಕ್ರಮದಲ್ಲಿ ಸಂಘದ ಗೌರವ ಅಧ್ಯಕ್ಷ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ವಿಶ್ವಕರ್ಮ ಸಮುದಾಯದ ತಾಲೂಕು ಘಟಕದ ಅಧ್ಯಕ್ಷ ಹೊಸೂರು ಸ್ವಾಮಿ, ಮುಖಂಡರಾದ ರಾಜಶೇಖರ್, ಲೋಕೇಶ್, ಗಂಜಾಂ ಕೃಷ್ಣಾಚಾರಿ, ಕೂಡಲಕುಪ್ಪೆ ಸೋಮಶೇಖರ್, ಅರಕೆರೆ ದೇಶಿ ಚಲುವಾಚಾರಿ ಹಾಗೂ ಕಾಳಿಕಾಂಬ ದೇಗುಲದ ಪ್ರಧಾನ ಅರ್ಚಕ ಮಂಜುನಾಥ್, ದಸಂಸ ಜಿಲ್ಲಾ ಸಂಚಾಲಕ ಕುಬೇರ ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.