ಜಿಲ್ಲೆ

ವಿಶ್ವಕರ್ಮ ಯೋಜನೆಯಡಿ 20 ಲಕ್ಷಕ್ಕೂ ಅಧಿಕ ನೋಂದಣಿ

ಚಿತ್ರದುರ್ಗ: ದೇಶದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ 20 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳು ನೋಂದಣಿ ಆಗಿದ್ದಾರೆಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ನಗರದ ಶಾರದಾ ಸಭಾಭವನದಲ್ಲಿ ಶುಕ್ರವಾರ ಪಿಎಂ ವಿಶ್ವಕರ್ಮ ಯೋಜನೆ ವಾರ್ಷಿಕೋತ್ಸವ ಅಂಗವಾಗಿ ರಾಷ್ಟ್ರೀಯ ಪಿಎಂ ವಿಶ್ವಕರ್ಮ ಕಾರ‌್ಯಕ್ರಮ ನೇರ ಪ್ರಸಾರ ವೀಕ್ಷಣೆ ಹಾಗೂ ಫಲಾನುಭವಿಗಳಿಗೆ ತರಬೇತಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಯೋಜನೆಯಡಿ ಫಲಾನುಭವಿಗಳಿಗೆ ಕೇಂದ್ರ 1400 ಕೋಟಿ ರೂ. ಅಧಿಕ ಮೊತ್ತವನ್ನು ಸಬ್ಸಿಡಿ ಬಿಡುಗಡೆ ಮಾಡಿದೆ ಎಂದರು.
ಈವರೆಗೆ ಎಂಟು ಲಕ್ಷ ಕುಶಲಕರ್ಮಿಗಳು ಉನ್ನತ ತರಬೇತಿ ಪಡೆದಿದ್ದಾರೆ. 1.60 ಲಕ್ಷಕ್ಕೂ ಹೆಚ್ಚು ಜನರು ಇದರ ಲಾಭ ಪಡೆದಿದ್ದಾರೆ. ಕುಶಲಕರ್ಮಿಗಳಿಗೆ 15 ಸಾವಿರ ರೂ. ಮೌಲ್ಯದ ಟೂಲ್‌ಕಿಟ್ ಒದಗಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ 18 ವಿವಿಧ ಕುಲ ಕಸುಬುಗಳನ್ನು ನಂಬಿ ಜೀವನ ನಡೆಸುತ್ತಿರುವವರಿಗೆ ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು ಒದಗಿಸಲು ಕಳೆದ ವರ್ಷ ಸೆಪ್ಟೆಂಬರ್ 17 ರಂದು 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಇದರಡಿ 3 ಲಕ್ಷ ರೂ. ವರೆಗೂ ಸಾಲ, 30 ತಿಂಗಳ ಅವಧಿಯೊಳಗೆ ಶೇ.5 ಬಡ್ಡಿದರಲ್ಲಿ ಸಾಲ ಮರುಪಾವತಿಗೂ ಅವಕಾಶ ನೀಡಲಾಗಿದೆ. ಕೇಂದ್ರ ಶೇ.8 ಬಡ್ಡಿ ಸಬ್ಸಿಡಿ ಭರ್ತಿ ಮಾಡಲಿದೆ ಎಂದರು.
ನಕಾಫ್ ಸಂಸ್ಥೆ ತರಬೇತಿ ವ್ಯವಸ್ಥಾಪಕ ಉಮಾಕಾಂತ್ ಮನ್ನಾಳೆ ಮಾತನಾಡಿ, ಚಿತ್ರದುರ್ಗದ ಅಮ್ಮ ಪಬ್ಲಿಕ್ ಶಾಲೆಯಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತರಬೇತಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ 700 ಜನರು ತರಬೇತಿ ಪಡೆದಿದ್ದಾರೆ. ಎಲ್ಲರಿಗೂ ಶಿಷ್ಯವೇತನ ಹಾಗೂ ಟೂಲ್‌ಕಿಟ್ ವಿತರಿಸಲಾಗಿದೆ, ಸಾಲ ಸೌಲಭ್ಯಕ್ಕೂ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ರುಡ್‌ಸೆಟ್ ಸಂಸ್ಥೆ ನಿರ್ದೇಶಕಿ ರಾಧಮ್ಮ, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ಡಿಡಿ ಟಿ.ವೇಮಣ್ಣ, ಎಡಿ ಡಿ.ಉಮೇಶ್, ಅತೀಕ್ ಅಹಮದ್, ನಿರ್ಮಲಾ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಇತರರು ಇದ್ದರು.