ಜಿಲ್ಲೆ

ವಿಶ್ವಕರ್ಮ ಜಯಂತಿ ಪ್ರಯುಕ್ತ ನೂತನ ವಿಶ್ವಕರ್ಮ ವೃತ್ತ ನಾಮಕರಣ

ಹಾಸನ : ಕಲ್ಲಿನಿಂದ ಮೂರ್ತಿಗಳನ್ನು ಸಿದ್ದ ಪಡಿಸುವಂತೆ ಎಲ್ಲರೂ ತಮ್ಮ ಮಕ್ಕಳನ್ನು ದೇಶದ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಿ ಎಂದು ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ, ಹಾಸನ ಇವರ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ದೇಶದ ಸರ್ವತೋಮುಖ ಏಳಿಗೆಗೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ ಎಂದು ವಿಶ್ವಕರ್ಮರನ್ನು ಸ್ಮರಿಸಿದರು.

ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಎಸ್ ಪ್ರಭಾಕರ್ ಮಾತನಾಡಿ, ವಿಶ್ವಕರ್ಮ ಸಮಾಜದವರಿಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ ಆದರೆ ಇದು ಸಮುದಾಯದ ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಹಾಗಾಗಿ ಇದರ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

ಅರೆಮಾದನ ಹಳ್ಳಿ ಮಠದ ಶಿವಸುಜ್ಞಾನ ಮಹಾ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕೊಡಗಿನ ಹವ್ಯಾಸಿ ಸಂಶೋಧಕರು ಮತ್ತು ಬರಹಗಾರರಾದ ಸತೀಶ್ ಮುಳ್ಳೂರು ಅವರು ಉಪನ್ಯಾಸ ನೀಡುವ ಮೂಲಕ ವಿಶ್ವಕರ್ಮ ಜಯಂತ್ಯೋತ್ಸವದ ಮಹತ್ವವನ್ನು ತಿಳಿಸಿಕೊಟ್ಟರು.

ಇದೇ ವೇಳೆ ದೇಶದ ಬೆಳವಣಿಗೆಗೆ ಸೇವೆ ಸಲ್ಲಿಸಿದ ಸಮುದಾಯದ ಪ್ರಮುಖರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲೇಶ್ ಗೌಡ, ಜಿಲ್ಲಾ ವಿಶ್ವಕರ್ಮ ಸಮಿತಿಯ ಗೌರವ ಅಧ್ಯಕ್ಷ ಹೆಚ್.ವಿ ಹರೀಶ್, ಅಧ್ಯಕ್ಷರಾದ ಜಿ. ಕುಮಾರ್, ಮಹಿಳಾ ಮಂಡಳಿಯ ಅಧ್ಯಕ್ಷ ಅನಿಲಪದ್ಮನಾಭ, ತಾಲೂಕು ವಿಶ್ವ ಕರ್ಮ ಸಮಿತಿಯ ಅಧ್ಯಕ್ಷ ಹೆಚ್.ಬಿ ಕುಮಾರ್, ಉಪಾಧ್ಯಕ್ಷ ಬ್ಯಾಡರಂಗಚಾರ್, ತಾಲ್ಲೂಕು ವಿಶ್ವಕರ್ಮ ಯುವಕ ಸಂಘದ ಸತೀಶ್ ಹಾಗೂ ಇದ್ದರು.

ಆಕರ್ಷಕ ಮೆರವಣಿಗೆಗೆ ಶಾಸಕರಿಂದ ಚಾಲನೆ:
ವಿಶ್ವಕರ್ಮ ಜಯಂತಿಯ ಅಂಗವಾಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ, ಹಾಸನ ಇವರ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಆಕರ್ಷಕ ಮೆರವಣಿಗೆಗೆ ಶಾಸಕ ಪ್ರೀತಂ ಜೆ. ಗೌಡ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ವಿಶ್ವಕರ್ಮ ವೃತ್ತ ಎಂದು ನಾಮಕರಣ :

ನಗರದ ಬಿ.ಎಂ ರಸ್ತೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮುಂಭಾಗದಲ್ಲಿರುವ ವೃತ್ತಕ್ಕೆ ವಿಶ್ವಕರ್ಮ ವೃತ್ತ ಎಂದು ನಾಮಕರಣ ಮಾಡಲಾಗಿದ್ದು, ಶಾಸಕ ಪ್ರೀತಂ ಜೆ. ಗೌಡ ಉದ್ಘಾಟಿಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಸಂಖ್ಯೆಯ ಜನರ ನಡುವೆ ವಾದ್ಯ ಗೋಷ್ಠಿಯ ಮೂಲಕ ಮೆರವಣಿಗೆಯು ವಿಜೃಂಭಣೆಯಿಂದ ಸಾಗಿತು.