ಕಲಬುರಗಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ೬ನೇ ಪಡೆ ಕೆಎಸ್‌ಆರ್‌ಪಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ ನಗರದ ಸುಲ್ತಾನಪುರದ ೬ನೇ ಕೆಎಸ್‌ಆರ್‌ಪಿ ಪಡೆಯ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತಿಕಾಂತ ಸ್ವಾಮಿ, ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ಒತ್ತಡ ರಹಿತ ಜೀವನ ನಡೆಸಬೇಕು. ಇಷ್ಟಪಟ್ಟು ಕೆಲಸ ಮಾಡಬೇಕು ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ರಾಜಕುಮಾರ ಕುಲಕರ್ಣಿ ಮಾತನಾಡಿ, ಯಾವುದೇ ರೀತಿಯ ಮಾನಸಿಕ ಆರೋಗ್ಯ ಕಾಯಿಲೆ ಇದ್ದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮಾನಸಿಕ ಆರೋಗ್ಯ ಕಾಯಿಲೆಯಿಂದ ಬಳಲುತ್ತಿದ್ದರೆ ಉಚಿತ ಆಪ್ತ ಸಮಾಲೋಚನೆಗಾಗಿ ೧೪೪೧೬ ಟೆಲಿ ಮಾನಸ್ ಸಹಾಯವಾಣಿಗೆ ಕರೆ ಮಾಡಬೇಕು ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ.ಮಹಮ್ಮದ್ ಇರಫಾನ್ ಮಹಾಗಾವಿ ಮಾತನಾಡಿ, ಸ್ಕಿಜೋಫ್ರೀನಿಯಾ ಕಾಯಿಲೆಯ ಲಕ್ಷಣ, ಕಾರಣ ಮತ್ತು ಚಿಕಿತ್ಸಾ ವಿಧಾನ ಕುರಿತು ವಿವರಿಸಿದರು.
ಅಧ್ಯಕ್ಷತೆವಹಿಸಿದ್ದ ಕೆಎಸ್‌ಆರ್‌ಪಿ ಕಮಾಂಡೆAಟ್ ಬಸವರಾಜ ಜಿಳ್ಳೆ ಮಾತನಾಡಿದರು. ಆರ್‌ಪಿಐ ನಾಗೇಶ ಕುಂಬಾರ ಇದ್ದರು. ಆರ್‌ಪಿಐ ದತಾತ್ರಿ ನಿರೂಪಿಸಿದರು. ಜಿಲ್ಲಾ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ನಾಗರಾಜ ಬಿರಾದಾರ್ ಸ್ವಾಗತಿಸಿದರು. ಸಹಾಯಕ ಕಮಾಂಡೆAಟ್ ಶರಣಬಸು ಕೋಲಾರಿ ವಂದಿಸಿದರು.