ಹಾಸನ: ನಗರದ ಹೇಮಾವತಿ ಪ್ರತಿಮೆ ಮುಂಭಾಗ ಭಾರತೀಯ ವೈದ್ಯಕೀಯ ಸಂಘ, ಪ್ರಸ್ತೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘ, ಭಾರತೀಯ ಶಿಶು ವೈದ್ಯಕೀಯ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಬೊಜ್ಜು ದಿನಾಚರಣೆ ಪ್ರಯುಕ್ತ ಸೋಮವಾರ ಬೆಳಗ್ಗೆ ಜಾಗೃತಿ ಜಾಥ ನಡೆಸಿ ಬೊಜ್ಜು (ಸ್ಥೂಲಕಾಯ) ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ದೇವದಾಸ್ ಇದೇ ವೇಳೆ ಮಾತನಾಡಿ, ಇತ್ತೀಚಿನ ಸಮೀಕ್ಷೆ ಪ್ರಕಾರ ಪ್ರಪಂಚಾದ್ಯಂತ ನೂರು ಕೋಟಿ ಜನರಿಗೆ ಬೊಜ್ಜಿನ ಸಮಸ್ಯೆ ಕಂಡು ಬಂದಿದೆ. ಅದರಲ್ಲೂ ಮಕ್ಕಳಲ್ಲೇ ಹೆಚ್ಚು ಕಾಣಿಸುತ್ತಿದೆ. ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯಲ್ಲಿ ಬಹಳ ಬದಲಾವಣೆಯಾಗಿದೆ ಎಂದರು.
ಕೋವಿಡ್ ಬಂದ ನಂತರ ಎಲ್ಲರೂ ಸೋಮಾರಿಗಳಾಗಿದ್ದು, ಜಂಕ್ ಫುಡ್ ಸೇವನೆ ಮತ್ತು ಕಾರ್ವಡಿಟ್ ಡ್ರಿಂಕ್ ಕುಡಿಯುವುದರಿಂದ ಮಕ್ಕಳ ದೇಹದಲ್ಲಿ ಹೆಚ್ಚು ಭಾರ ಕಾಣಿಸಿಕೊಳ್ಳುತ್ತಿದೆ. ವ್ಯಾಯಾಮ ಮಾಡುವುದು ಕಡಿಮೆ ಮಾಡಿ ಮೊಬೈಲ್ ಬಳಕೆಗೆ ಹೆಚ್ಚಾಗಿದೆ. ಈ ಎಲ್ಲಾ ಕಾರಣದಿಂದಲೇ ಬೊಜ್ಜು ಜಾಸ್ತಿ ಆಗುತ್ತಿದೆ. ಈ ಬೊಜ್ಜು ಒಂದು ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ. ಬೊಜ್ಜು ಬಂತೆಂದರೇ ಹಲವಾರು ಸಮಸ್ಯೆಗಳು ಹಾಗೂ ನೂರಾರು ಕಾಯಿಲೆಗಳು ದೇಹದಲ್ಲಿ ಕಾಣಿಸಲು ಪ್ರಾರಂಭಿಸುತ್ತದೆ. ಸಾರ್ವಜನಿಕರು ಈಗಲಾದರೂ ತಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡು ಒಳ್ಳೆಯ ಆಹಾರ ಪದ್ಧತಿ ರೂಡಿಸಿಕೊಂಡು ಪ್ರತಿನಿತ್ಯ ಕೆಲ ಸಮಯ ವ್ಯಾಯಾಮ ಮಾಡಿ ಸಕ್ರಿಯರಾಗಬೇಕು ಎಂದು ಕಿವಿಮಾತು ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ದಿನೇಶ್ ಮಾತನಾಡಿ, ವಿಶ್ವ ಬೊಜ್ಜು ದಿನಾಚರಣೆ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳಿಂದ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಇದು ಕಾಲ್ನಡಿಗೆ ಜಾಥವಾಗಿದೆ. ಜನರಲ್ಲಿ ಬರುವ ಬೊಜ್ಜಿನಿಂದ ಅನೇಕ ಕಾಯಿಲೆಗಳು ಹರಡುತ್ತಿವೆ. ಇದನ್ನು ನಿಯಂತ್ರಿಸಬೇಕಾದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಅಗತ್ಯ. ಹಣ್ಣು, ತರಕಾರಿ, ನೀರು ಇವನ್ನು ಹೆಚ್ಚು ಬಳಕೆ ಮಾಡಬೇಕು. ಸಿಹಿ ಸೇವನೆ ಕಡಿಮೆ ಮಾಡಬೇಕು. ನಿಯಮಿತವಾದ ವ್ಯಾಯಾಮ, ವಾಕಿಂಗ್ ಮಾಡುವಂತೆ ಸಲಹೆ ನೀಡಿದರು.
ಪ್ರಸೂತಿ ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷರಾದ ಗಿರಿಜಾ ಮಾತನಾಡಿ, ಪ್ರಸ್ತುತದಲ್ಲಿ ಓಬೆಸಿಟಿ ಸಮಸ್ಯೆ ಮೂರು ಪಟ್ಟು ಹೆಚ್ಚು ಕಂಡು ಬರುತ್ತಿದೆ. ಸ್ತ್ರೀಯರು ಸ್ಥೂಲಕಾಯಕರಾಗಿ ಗರ್ಭೀಣಿ ಆದಾಗ ಸಾಕಷ್ಟು ದುಷ್ಪಾರಿಣಾಮ ಬೀರುತ್ತಿದೆ. ಬೊಜ್ಜಿನಿಂದ ಗರ್ಭ ಧರಿಸುವುದಕ್ಕೂ ಕೂಡ ಕಷ್ಟವಾಗುತ್ತದೆ. ಇದರಿಂದಲೇ ಬಿಪಿ, ಶುಗರ್ ಬರುವುದು, ಪಿಡ್ಸ್ ಬರುವ ಸಮಸ್ಯೆಗಳು ಎದುರಾಗಲಿವೆ. ಜತೆಗೆ ಮಗುವಿನ ಮೇಲಲೂ ಕೆಟ್ಟ ಪರಿಣಾಮ ಬೀರಲಿದೆ ಎಂದರು.
ಭಾರತೀಯ ಶಿಶು ವೈದ್ಯಕೀಯ ಸಂಘದ ಅಧ್ಯಕ್ಷ ಮತ್ತು ಮಕ್ಕಳ ತಜ್ಞ ಡಾ. ಎಚ್. ಪಾಲಾಕ್ಷ, ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ಅಬ್ದುಲ್ ಬಶೀರ್, ಪ್ರಸೂತಿ ಸ್ತ್ರೀ ರೋಗ ತಜ್ಞರಾದ ಡಾ. ಸಾವಿತ್ರಿ, ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಯತೀಶ್, ಡಾ. ಭವ್ಯಾ ಇತರರು ಜಾಥದಲ್ಲಿ ಭಾಗವಹಿಸಿದ್ದರು.