ಗೋಣಿಕೊಪ್ಪ: ಪೊನ್ನಂಪೇಟೆಯ ಕೂರ್ಗ್ ಇನ್ಸ್‌ಟಿಟ್ಯೂಟ್ ಆ್ ಟೆಕ್ನಾಲಜಿ ಶಿಕ್ಷಣ ಸಂಸ್ಥೆಯಲ್ಲಿ ಕಾಲೇಜಿನ ಇಕೋ ಕ್ಲಬ್ ವತಿಯಿಂದ ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸಲಾಯಿತು.
ಪೊನ್ನಂಪೇಟೆ ಅರಣ್ಯ ಕಾಲೇಜಿನ ನಿವೃತ್ತ ಡೀನ್ ಸಿ.ಜಿ.ಕುಶಾಲಪ್ಪ ಅವರು ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಕೊಡಗಿನ ಜೀವವೈವಿಧ್ಯ ಜತೆಗೆ ಪ್ರಕೃತಿ ಸಂರಕ್ಷಣೆ, ಮಾನವ ಹಾಗೂ ವನ್ಯಜೀವಿಗಳ ಸಂಘರ್ಷ, ಜಾಗತಿಕ ತಾಪಮಾನದ ಪರಿಣಾಮ, ಕಾಫಿ, ಮೆಣಸು, ಭತ್ತದ ಕೃಷಿ ಹಾಗೂ ಪ್ರವಾಸಿ ಕೇಂದ್ರಗಳಿಂದ ಪರಿಸರದ ಮೇಲಾಗುವ ಪರಿಣಾಮ ಮುಂತಾದ ವಿಚಾರಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.
ಇದೇ ಸಂದರ್ಭ ಡಾ.ಸಿ.ಜಿ.ಕುಶಾಲಪ್ಪ ಅವರು ಉಡುಗೊರೆಯಾಗಿ ನೀಡಿದ ಬಿದಿರಿನ ಎರಡು ವಿಶಿಷ್ಟ ತಳಿಗಳನ್ನು ಕಾಲೇಜು ಆವರಣದಲ್ಲಿ ನೆಡಲಾಯಿತು. ಸಂಚಾಲಕ ಪ್ರೊ. ಕಾರ್ತಿಕ, ಇಕೋ ಕ್ಲಬ್ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ವರ್ಗ ಹಾಜರಿದ್ದರು.