ದಾವಣಗೆರೆ : ಮೊಬೈಲ್ ಫೋನ್ ಬಂದಾಗಿನಿಂದ ಫೋಟೋ ತೆಗೆಯುವುದು ಬಹಳ ಸುಲಭವಾಗಿದೆ. ಆದರೆ ಮೊದಲು ಹಾಗಿರಲಿಲ್ಲ. ಕ್ಯಾಮರಾಗಳ ಮೇಲೆಯೇ ಅವಲಂಬಿಸಬೇಕಿತ್ತು. ತಂತ್ರಜ್ಞಾನ ಬೆಳೆದಂತೆ ಹಳೆಯ ಕ್ಯಾಮರಾಗಳು ಕಣ್ಮರೆಯಾದವು.
ಈಗಿನ ತಲೆಮಾರಿನವರಿಗೆ ಅವುಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ನಗರದ ಗುರುಭವನದಲ್ಲಿ ಶುಕ್ರವಾರ, ಫೋಟೋಗ್ರಾಫರ್ ಯೂತ್ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಹಳೆಯ ಕ್ಯಾಮರಾಗಳು, ಛಾಯಾಗ್ರಹಣ ಪರಿಕರಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ರಾಜ್ಯದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕರಿಗಾಗಿ ಆಯೋಜಿಸಲಾಗಿತ್ತು.
ಸುಮಾರು 120 ವರ್ಷಗಳ ಹಿಂದಿನ ಕ್ಯಾಮರಾಗಳಿಂದ ಹಿಡಿದು ನಂತರದಲ್ಲಿ ಬಂದ ವಿವಿಧ ಪ್ರಕಾರ, ವಿನ್ಯಾಸದ ಕ್ಯಾಮರಾಗಳನ್ನು ಅಲ್ಲಿ ಪ್ರದರ್ಶಿಸಲಾಯಿತು. 140 ಫೋಟೋ ಕ್ಯಾಮರಾಗಳು, ಐದಾರು ಫೀಲ್ಡ್ ಕ್ಯಾಮರಾಗಳು, 9 ವಿಡಿಯೋ ಕ್ಯಾಮರಾಗಳು ಅಲ್ಲಿದ್ದವು. ಜತೆಗೆ ಲೈಟ್ ಸ್ಟಾೃಂಡ್, ಬಲ್ಬ್, ಎನ್‌ಲಾರ್ಜರ್, ಡೆವಲಪರ್, ನೆಗೆಟಿವ್ ಡ್ರಾಗಳು ಹೀಗೆ ಈಗ ಬಳಕೆಯಲ್ಲಿ ಇಲ್ಲದ ಪರಿಕರಗಳು ಗಮನ ಸೆಳೆದವು.
ಭಾರತದಲ್ಲಿ ತಯಾರಾದ ಕ್ಯಾಮರಾಗಳ ಜತೆಗೆ ಇಂಗ್ಲಂಡ್, ಜರ್ಮನಿ, ಜಪಾನ್, ಚೀನಾ ಮುಂತಾದ ರಾಷ್ಟ್ರಗಳಲ್ಲಿ ಉತ್ಪಾದನೆಯಾದ ಕ್ಯಾಮರಾಗಳನ್ನು ಇಡಲಾಗಿತ್ತು. ವಿವಿಧ ಛಾಯಾಗ್ರಾಹಕರು ತಮ್ಮ ಸಂಗ್ರಹದಲ್ಲಿದ್ದ ಕ್ಯಾಮರಾಗಳನ್ನು ತಂದಿದ್ದರು.
ಹಿರಿಯ ಛಾಯಾಗ್ರಾಹಕ ಎಚ್.ಬಿ. ಮಂಜುನಾಥ್ ಅವರಂತೂ ತಮ್ಮ ಹಳೆಯ ಸ್ಟುಡಿಯೋ ಮರುಸೃಷ್ಟಿ ಮಾಡಿದ್ದರು. ಇಂಗ್ಲಂಡ್‌ನಲ್ಲಿ ತಯಾರಾದ, 120 ವರ್ಷ ಪುರಾತನವಾದ ಫೀಲ್ಡ್ ಕ್ಯಾಮರಾ, ಆಗ ಬಳಸುತ್ತಿದ್ದ ಲೆನ್ಸ್ ಇನ್ನಿತರ ಪರಿಕರಗಳನ್ನು ಪ್ರದರ್ಶಿಸಿದರು.
ತಮ್ಮ ತಂದೆಯವರ ಕಾಲದಿಂದಲೂ ಬಳಸುತ್ತಿದ್ದ ಕ್ಯಾಮರಾಗಳನ್ನು ಸಾರ್ವಜನಿಕರಿಗೆ ಪರಿಚಯಿಸಿದರು. ಪ್ರಿನ್ಸ್ ಜಯಚಾಮರಾಜೇಂದ್ರ, ಮಹಾತ್ಮ ಗಾಂಧೀಜಿ ಮುಂತಾದ ಮಹನೀಯರ ಫೋಟೋ ತೆಗೆಯಲು ಬಳಸಿದ್ದ ಕ್ಯಾಮರಾ ಮತ್ತು ಲೆನ್ಸ್ ಬಗ್ಗೆ ಹೆಮ್ಮೆಯಿಂದ ವಿವರಿಸಿದರು. ಅಪರೂಪದ ಈ ಪ್ರದರ್ಶನವನ್ನು ಸಾರ್ವಜನಿಕರು ಆಸಕ್ತಿಯಿಂದ ವೀಕ್ಷಿಸಿದರು.
ಚಿತ್ರದುರ್ಗ ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್.ಎಸ್. ಕೇರ್ ಟ್ರಸ್ಟ್‌ನ ಡಾ. ಪ್ರಭಾ ಮಲ್ಲಿಕಾರ್ಜುನ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರದರ್ಶನ ನೋಡಿ ಬಹಳಷ್ಟು ವಿಚಾರಗಳನ್ನು ಕಲಿಯಲು ಸಾಧ್ಯವಾಯಿತು. ಹಿಂದಿನ ಛಾಯಾಗ್ರಾಹಕರು ಬಳಸುತ್ತಿದ್ದ ಕ್ಯಾಮರಾಗಳ ಪರಿಚಯವಾಯಿತು ಎಂದು ಪ್ರತಿಕ್ರಿಯಿಸಿದರು.
ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ವಿಜಯ್ ಜಾಧವ್, ಶ್ರೀನಾಥ ಅಗಡಿ, ಎಸ್.ಆರ್. ತಿಪ್ಪೇಸ್ವಾಮಿ, ಎಚ್.ಕೆ.ಸಿ. ರಾಜು, ಶಿಕಾರಿ ಶಂಭು, ದುಗ್ಗೇಶ್ ಕಡೇಮನೆ, ಮಲ್ಲಿಕಾರ್ಜುನ್, ತಿಲಕ್ ಇದ್ದರು.
...
* ಗಮನ ಸೆಳೆದ ಛಾಯಾಚಿತ್ರಗಳು
ಜಿಲ್ಲೆಯ ಛಾಯಾಗ್ರಾಹಕರು ತೆಗೆದ ಅಪರೂಪದ ಛಾಯಾಚಿತ್ರಗಳನ್ನೂ ಅಲ್ಲಿ ಪ್ರದರ್ಶಿಸಲಾಯಿತು. ವನ್ಯಮೃಗಗಳು, ಪಕ್ಷಿಗಳ ಲೋಕವೇ ಅನಾವರಣಗೊಂಡಿತ್ತು. ಹಬ್ಬಗಳ ಆಚರಣೆ, ವೈಮಾನಿಕ ಪ್ರದರ್ಶನ, ಕಂಬಳ, ಭೂತಾರಾಧನೆಯ ದೃಶ್ಯಗಳನ್ನೂ ಸೆರೆ ಹಿಡಿಯಲಾಗಿತ್ತು.
ಹರಿಹರೇಶ್ವರ ದೇವಸ್ಥಾನ, ಸಂತೇಬೆನ್ನೂರು ಪುಷ್ಕರಣಿ ಸೇರಿ ಜಿಲ್ಲೆಯ ಐತಿಹಾಸಿಕ ಸ್ಥಳಗಳು, ಮಹತ್ವದ ಕೆರೆಗಳ ಚಿತ್ರಗಳು ದೃಶ್ಯ ರೂಪಕದಂತೆ ಕಂಡವು. ಹಿರಿಯ ಛಾಯಾಗ್ರಾಹಕ ಹೇಮಿಚಂದ್ ಜೈನ್ 100 ಛಾಯಾಚಿತ್ರಗಳನ್ನು, ಕೆ.ಎಸ್. ರಾಜಶೇಖರ್ 50ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಪ್ರದರ್ಶಿಸಿದರು.