ಮೈಸೂರು: ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ಪರಿಸರ ಸ್ನೇಹ ತಂಡ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಮಾರ್ಚ್ 20 ರಂದು ‘ಪರಿಸರ ಜಾಗೃತಿ ಸೈಕಲ್ ಅಭಿಯಾನ’ ಆಯೋಜಿಸಿದೆ.
ಅಂದು ಬೆಳಗ್ಗೆ 7 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭವಾಗುವ ಸೈಕಲ್ ಜಾಥವು ನಗರದ ನಾನಾ ಭಾಗದಲ್ಲಿ ಸಂಚರಿಸಿ ಕುಕ್ಕರಹಳ್ಳಿ ಕೆರೆ ಬಳಿ ಅಂತ್ಯಗೊಳ್ಳಲಿದೆ. ಬೇಸಿಗೆಯಲ್ಲಿ ಸಣ್ಣಪುಟ್ಟ ಪ್ರಾಣಿ ಪಕ್ಷಿಗಳನ್ನು ಬಿಸಿಲಿನ ತಾಪಮಾನದಿಂದ ಕಾಪಾಡಲು ಆಹಾರ ನೀರು ಒದಗಿಸುವಂತೆ ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದು ಪರಿಸರ ಪ್ರೇಮಿ ಎನ್.ಎಂ.ನವೀನ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಿಸರ ಜಾಗೃತಿ ಸೈಕಲ್ ಅಭಿಯಾನಕ್ಕೆ ಡಿಸಿಪಿ ಡಾ.ಪ್ರಕಾಶ್‌ಗೌಡ ಚಾಲನೆ ನೀಡಲಿದ್ದಾರೆ. ರಂಗಕರ್ಮಿ ಮಂಡ್ಯ ರಮೇಶ್, ಸುಯೋಗ್ ಆಸ್ಪತ್ರೆಯ ವ್ಯವಸ್ಥಾಪಕ ಡಾ.ಎಸ್.ಪಿ.ಯೋಗಣ್ಣ, ಅಂಬಾರಿ ಕನ್ವೆನ್ಷನ್ ಹಾಲ್ ಮಾಲೀಕ ಸ್ವೀಟ್ ಮಹೇಶ್, ಪರಿಸರ ಶಿಕ್ಷಣ ತಜ್ಞ ಸಪ್ತ ಗಿರೀಶ್, ಉರಗ ತಜ್ಞ ಸ್ನೇಕ್ ಶ್ಯಾಮ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ಎಸ್.ಇ.ಗಿರೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಕಾರ್ಯದರ್ಶಿ ಅಜಯ್ ಶಾಸಿ ಸೇರಿದಂತೆ ಇತರರಿದ್ದರು.