ಜಿಲ್ಲೆ

ವಿಶ್ವ ಕಂಡ ಶ್ರೇಷ್ಠ ಸಂತ ಸಿದ್ಧಗಂಗಾ ಶ್ರೀ

ಮಾಗಡಿ : ಸಿದ್ಧಗಂಗೆ, ಆದಿಚುಂಚನಗಿರಿ ಮಠಾಧ್ಯಕ್ಷರು, ಸಾಲುಮರದ ತಿಮ್ಮಕ್ಕ, ಕೆಂಪೇಗೌಡರನ್ನು ನೀಡಿದ ಪುಣ್ಯ ಭೂಮಿ ಮಾಗಡಿ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.

ತಾಲೂಕಿನ ಬ್ಯಾಲಕೆರೆ ಗ್ರಾಮದಲ್ಲಿ ಹೊನ್ನಾದೇವಿ ದೇವಾಲಯದ ರಾಜಗೋಪುರ ಕಲಶ ಸ್ಥಾಪನೆ, ಕುಂಭಾಭಿಷೇಕ ಕಾರ್ಯಕ್ರಮ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಹಿಂದು ಧರ್ಮದ ಪಾವಿತ್ರ್ಯದ ಬಗ್ಗೆ ಸಂದೇಶ ನೀಡಿದ ವಿವೇಕಾನಂದರು ನನ್ನ ದೇಶದಂತೆ ಮತ್ತೊಂದು ದೇಶವನ್ನು ಕಾಣಲು ಸಾಧ್ಯವಿಲ್ಲ ಎಂದಿದ್ದರು. ಈ ಮಣ್ಣಿನಲ್ಲಿ ಭಗವಂತನ ನಂಬಿಕೆ, ದೇಶದ ಬಗ್ಗೆ ಶ್ರದ್ಧೆ, ವಿಶ್ವಾಸ ಅಚಲವಾಗಿದೆ. ಜಗತ್ತು ಭಾರತದತ್ತ ನೋಡುತ್ತಿರುವುದು ಆಧ್ಯಾತ್ಮಿಕ ಶಕ್ತಿಯ ಪ್ರತಿಬಿಂಬವಾಗಿದೆ ಎಂದರು.

ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವಿಶ್ವ ಕಂಡ ಶ್ರೇಷ್ಠ ಸಂತರು. ಬದುಕನ್ನು ಸಮಾಜಕ್ಕೆ ಹೇಗೆ ಸಮರ್ಪಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಮನುಷ್ಯನಿಗೆ ತಾಳ್ಮೆ, ಸಹನೆ ಬಹಳ ಮುಖ್ಯ. ಅಂಥವರು ದೀರ್ಘಕಾಲ ಬದುಕುತ್ತಾರೆ, ಯಾವುದೇ ಸಮಸ್ಯೆ ಬಂದರೂ ಧೈರ್ಯವಾಗಿ ಎದುರಿಸಿ, ಮನಸ್ಸಿನಲ್ಲಿನ ರಾಗ, ದ್ವೇಷ ಬಿಟ್ಟು ಸಾಮರಸ್ಯದಿಂದ ಬದುಕುವಂತೆ ತಿಳಿಸಿದರು.

ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಶರಣ ಸಂಪನ್ನೆ ಹೊನ್ನಾದೇವಿ ಶಾಂತಿ, ಶ್ರದ್ಧೆ, ಶಕ್ತಿ, ದಯೆ, ಮಾತೃ ರೂಪದಲ್ಲಿದ್ದಾರೆ. ಇಲ್ಲಿ ನಡೆಯುವ ಜಾತ್ರೆಗಳು ವಿಶೇಷವಾಗಿದೆ. ತಾಯಿ, ತಂದೆ, ಗುರುಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವ ನೀಡಿದೆ. ತಾಯಿ ಮತ್ತು ಜನ್ಮ ಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂದರು.

ಆಧುನಿಕ ಯುಗದಲ್ಲಿ ವಿದ್ಯಾವಂತವರು ಹೆಚ್ಚಾದಂತೆ ವೃದ್ಧಾಶ್ರಮ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಸಂಸಾರ, ಸಂಬಂಧಗಳಲ್ಲಿ ವ್ಯತ್ಯಾಸವಾಗುತ್ತಿರುವುದು ಸರಿಯಲ್ಲ ಎಂದರು.

ಬ್ಯಾಲಕೆರೆ ಪುಣ್ಯವಂತ ಗ್ರಾಮ, ಶಿವಕುಮಾರ ಸ್ವಾಮೀಜಿ ಅವರ ಪ್ರೀತಿಗೆ ಭಾಜನವಾಗಿತ್ತು. ಸುತ್ತಮುತ್ತಲ ಗ್ರಾಮಗಳಲ್ಲಿ ಬಹುತೇಕ ಮಂದಿ ಉನ್ನತಮಟ್ಟದಲ್ಲಿ ಇದ್ದಾರೆ ಎಂದರೆ ಶಿವಕುಮಾರ ಶ್ರೀಗಳ ಬಹುದೊಡ್ಡ ಕೊಡುಗೆಯೇ ಕಾರಣ. ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕೆಂಬ ಕನಸು ಹೊಂದಿ ಬ್ಯಾಲಕೆರೆ, ಸೋಲೂರು, ಗುಡೇಮಾರನಹಳ್ಳಿ, ನಾರಸಂದ್ರ, ಬಂಡೇಮಠಗಳಲ್ಲಿ ಶ್ರೀಗಳು ಗ್ರಾಮಾಂತರ ಶಾಲೆಗಳನ್ನು ಸ್ಥಾಪಿಸಿ ಶಿಕ್ಷಣ ನೀಡಿ ಉತ್ತಮ ಪ್ರಜೆಯನ್ನಾಗಿ ಮಾಡಿದ್ದಾರೆ ಎಂದರು.

ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಜನರು ಆಂಗ್ಲ ಭಾಷೆಯ ಕಡೆ ಒಲು ತೋರುತ್ತಿದ್ದಾರೆ. ಆದಾಗ್ಯೂ ಬ್ಯಾಲಕೆರೆಯ ಕನ್ನಡ ಶಾಲೆ ಉಳಿಸಲು ಸುರಭಿ ಸಂಸ್ಥೆ ಹಾಸ್ಟೆಲ್ ಆರಂಭಿಸಿ ಶಾಲೆಯ ಅಸ್ತಿತ್ವ ಉಳಿಸಲು ಮುಂದಾಗಿದೆ ಎಂದರು.

ವೀರಶೈವ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಮಾತನಾಡಿ, ಕೇಂದ್ರದಲ್ಲಿ ಸಂಸದ ಡಾ.ಮಂಜುನಾಥ್ ಅವರಿಗೆ ಮಂತ್ರಿ ಸ್ಥಾನ ದಕ್ಕದಿರುವುದು ಬೇಸರ ಮೂಡಿಸಿದೆ ಎಂದರು.

ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲು ಬದ್ಧ : ದೇವಾಲಯದ ಬಳಿ ಯಾತ್ರಿನಿವಾಸ, ಸಮುದಾಯ ಭವನ ನಿರ್ಮಿಸಲು ಅನುದಾನ ನೀಡಲು ಬದ್ಧನಾಗಿದ್ದೇನೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ರಾಜ್ಯದಲ್ಲಿ ಶೇ.85 ಸಾಕ್ಷರತೆ ಸಾಧಿಸಲು ನಾಡಿನ ಮಠಗಳ ಕೊಡುಗೆ ಕಾರಣವಾಗಿದೆ. ಮಠಗಳು ಅಕ್ಷರ ದಾಸೋಹ, ಅನ್ನದಾಸೋಹ, ಆರೋಗ್ಯ ಸೇವೆ ನೀಡುತ್ತಿವೆ. ಸರ್ಕಾರದ ಮಾಡಬೇಕಾದ ಕೆಲಸ ಮಠಮಾನ್ಯಗಳು ಮಾಡುತ್ತಿವೆ. ಆರೋಗ್ಯ, ಶಿಕ್ಷಣ ಅಗತ್ಯವಾಗಿದ್ದು, ರಾಜ್ಯ, ಕೇಂದ್ರ ಸರ್ಕಾರಗಳು ಇದಕ್ಕೆ ನೀಡಬೇಕಾದ ಅನುದಾನದ ಪ್ರಮಾಣ ಕಡಿಮೆಯಾಗಿದೆ. ಚುನಾವಣೆ ನಂತರ ಪಕ್ಷಾತೀತವಾಗಿ ಕೆಲಸ ಮಾಡುವ ಸಂಸ್ಕೃತಿ ಬೆಳೆಯಬೇಕು, ಧಾರ್ಮಿಕ ಕಾರ್ಯಮಾಡುವ ಮೂಲಕ ನಮ್ಮನ್ನು ನಾವು ಶುದ್ಧೀಕರಣ ಮಾಡಿಕೊಳ್ಳಬೇಕು ಎಂದರು.