ಹೊಸಕೋಟೆ : ದೇಶದ ಅಭಿವೃದ್ಧಿಯೇ ಧ್ಯೇಯ ಎಂಬ ಸಂದೇಶ ಸಾರಿದ ಪ್ರಧಾನಿ ನರೇಂದ್ರ ಮೋದಿ ವಿಶ್ವನಾಯಕ ಎನಿಸಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಅಭಿಪ್ರಾಯಪಟ್ಟರು.
ಹೊಸಕೋಟೆ ನಗರ ಬಿಜೆಪಿ ಘಟಕ ಮತ್ತು ಯುವ ಮೋರ್ಚಾ ಕಾರ್ಯಕರ್ತರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮ, ಸರ್ಕಾರಿ ಕಾಲೇಜು ಆವರಣ, ಸಂತೇ ಮೈದಾನ ಸ್ವಚ್ಛತಾ ಕಾರ್ಯಕ್ರಮ ಮತ್ತು ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಮೊದಲಿಗೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜನತೆಯಲ್ಲಿ ಜಾಗೃತಿ ಮೂಡಿಸಿದವರು ಮೋದಿ. ಜನರ ನಾಡಿಮಿಡಿತ ಅರಿತಿರುವ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ತತ್ವ ಪ್ರತಿಪಾದಿಸುತ್ತ ಸಮಾಜದ ಎಲ್ಲ ವರ್ಗಗಳ ಬಡವರ ಕಲ್ಯಾಣಕ್ಕೆ ಮುಂದಾಗಿದ್ದಾರೆ. ಹಲವು ಯೋಜನೆಗಳನ್ನು ಜಾರಿ ಮಾಡಿ, ಬಡತನ ನಿರ್ಮೂಲನೆಗೆ ಪಣ ತೊಟ್ಟಿದ್ದಾರೆ ಎಂದರು.
ಜನ್ಮದಿನದ ಪ್ರಯುಕ್ತ ತಾಲೂಕಿನಲ್ಲಿ ಸ್ವಚ್ಛತಾ ಸೇವಾ ಸಪ್ತಾಹ ಹಮ್ಮಿಕೊಳ್ಳಲಾಗಿದ್ದು, ದೇವಾಲಯ ಸ್ವಚ್ಛತೆ, ಶಿಕ್ಷಕರಿಗೆ ಸನ್ಮಾನ ಸೇರಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಮೋದಿ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. 18 ಗಂಟೆ ಕೆಲಸ ಮಾಡುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ಅವರಿಗೆ ದೇಶವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಸಿ.ಜಯರಾಜ್ ಹೇಳಿದರು. 1,500 ಮಹಿಳೆಯರಿಗೆ ಸೀರೆ ವಿತರಿಸಲಾಯಿತು. ಅನ್ನಸಂತರ್ಪಣೆ ನಡೆಯಿತು.
ನಗರಸಭೆ ಸದಸ್ಯರಾದ ನಿತಿನ್, ಆಶಾ ರಾಜಶೇಖರ್, ಹರಿ, ಟೌನ್ ಬ್ಯಾಂಕ್ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಬಾಲಚಂದ್ರನ್, ಸದಸ್ಯರಾದ ಸಿ.ಪಿ.ನವೀನ್, ಜಿ.ಟಿ.ಮೋಹನ್ ಕುಮಾರ್, ಮುಖಂಡರಾದ ಅಶೋಕ್ ಗುಳ್ಳು, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಮತ್ತಿತರರಿದ್ದರು.