ಜಿಲ್ಲೆ

ವಿಶೇಷ ಹಕ್ಕುಗಳ ಸುತ್ತೋಲೆ ವಾಪಾಸ್‌ಗೆ ಯತ್ನ

ಶೃಂಗೇರಿ: ಯಾಡಿಯೂರಪ್ಪ ಮುಖ್ಯಮಂತ್ರಿಯಾದಾಗ 2010ರಲ್ಲಿ ವಿಶೇಷ ಹಕ್ಕುಗಳನ್ನು ಪಡೆದ ಭೂಮಿಗಳನ್ನು ಅರಣ್ಯಭೂಮಿ ಎಂದು ಸುತ್ತೋಲೆ ಹೊರಡಿಸಿದ ಕಾರಣ ಮಲೆನಾಡಿನ ರೈತರು ಹಾಗೂ ಜನಸಾಮಾನ್ಯರು ಭೂಮಿ ಹಕ್ಕು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಮಲೆನಾಡಿನ ಸೊಪ್ಪಿನಬೆಟ್ಟ ಕಾನು ಸಾಗುವಳಿದಾರರ ಹೋರಾಟ ಸಮಿತಿ ಸಂಚಾಲಕ ಬಿ.ಎ.ರಮೇಶ್ ಹೆಗ್ಡೆ ತಿಳಿಸಿದರು.

ಸೋಮವಾರ ಆರ್ಯ ಈಡಿಗ ಸಮುದಾಯಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಎರಡು ಸುತ್ತೋಲೆಗಳ ಕಾರಣದಿಂದ ಬಗರ್ ಹುಕುಂ ಸಾಗುವಾಳಿದಾರರ ಅರ್ಜಿಗಳು ಹಾಗೂ ಮನೆಗಳ ಸಕ್ರಮ ಅರ್ಜಿಗಳು ತಿರಸ್ಕೃತಗೊಂಡಿದ್ದು ಒತ್ತುವರಿದಾರರು ಎಂಬ ಹಣೆಪಟ್ಟಿ ಕಟ್ಟಿಕೊಂಡು 1963ರ ಅರಣ್ಯಕಾಯ್ದೆ ಅನ್ವಯ ಪ್ರಕರಣಗಳು ದಾಖಲಾಗಿ ಸಾಗುವಳಿದಾರರು ಭೂಮಿಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ದೂರಿದರು.

ಈ ಸುತ್ತೋಲೆಗಳನ್ನು ವಾಪಾಸ್ಸು ಪಡೆದು 2011ರಲ್ಲಿ ಉಚ್ಛ ನ್ಯಾಯಲಯದ ಆದೇಶದಂತೆ ಕೊಡಗಿನ ಬಾನ ಭೂಮಿಯ ಮಾಲೀಕತ್ವ ನೀಡಿದ ತಿದ್ದುಪಡಿಯಂತೆ ಮಲೆನಾಡಿನ ಸೊಪ್ಪಿನ ಬೆಟ್ಟ ಮುಂತಾದ ಭೂಮಿಗಳ ಸಾಗುವಳಿ ಹಕ್ಕು ನೀಡಬೇಕು ಎಂದು ಒತ್ತಾಯಿಸಿ ಸಂಬಂಧಪಟ್ಟ ಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ಭಾಸ್ಕರ್‌ನಾಯ್ಕ, ನಾರಾಯಣ್, ಮಹಾಬಲ, ಪುಟ್ಟಪ್ಪ ಹೆಗಡೆ, ಹಳ್ಳಿಬೈಲು ರಮೇಶ್, ತ್ರಿಮೂರ್ತಿ ಉಪಸ್ಥಿತರಿದ್ದರು.