ಜಿಲ್ಲೆ

ವಿಶೇಷ ಶಕ್ತಿ ಹೊಂದಿದ್ದ ಮಾದಾರ ಚನ್ನಯ್ಯ ಶರಣರು

ಚಿತ್ರದುರ್ಗ: ಬಸವಣ್ಣ ಸಾಮಾಜಿಕ, ಸಮಾನತೆ ಪರಿಕಲ್ಪನೆಯೊಂದಿಗೆ ಸ್ಥಾಪಿಸಿದ ಅನುಭವ ಮಂಟಪದಲ್ಲಿ ಮಾದಾರ ಚನ್ನಯ್ಯ ಅವರೂ ಇದ್ದರು. ದೇಶದ ವಿವಿಧ ಭಾಗಗಳ ಶರಣರ ಪರಿವಾರ ಕೂಡಲು ಕಾರಣವಾಯಿತು ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಹೇಳಿದರು.

ಮುರುಘಾಮಠದ ಮುರಿಗೆ ಶಾಂತವೀರ ಶ್ರೀ ಅವರ ಲೀಲಾ ವಿಶ್ರಾಂತಿ ತಾಣದ ಮುಂಭಾಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಶರಣ ಮಾದಾರ ಚನ್ನಯ್ಯ ಜಯಂತಿಯಲ್ಲಿ ಮಾತನಾಡಿದರು.

ತಮಿಳುನಾಡಿನ ಕಂಚಿಯ ಕರಿಕಾಲ ಚೋಳನ ಮಹಾಸಂಸ್ಥಾನದಲ್ಲಿ ಕುದುರೆ ಸಾಕುವ ಕಾಯಕ ಮಾಡಿಕೊಂಡಿದ್ದ ಚನ್ನಯ್ಯ ಗುಪ್ತ ಭಕ್ತಿಗೆ ಹೆಸರಾದವರು. ನಂತರ ಮಹಾನ್ ವ್ಯಕ್ತಿಯಾಗಿ ಬಸವಕಲ್ಯಾಣದತ್ತ ಮುಖ ಮಾಡಿ ಅನುಭವ ಮಂಟಪ ಸೇರಿದ್ದು, ಇತಿಹಾಸ. ಅವರಲ್ಲಿ ವಿಶೇಷ ಶಕ್ತಿ ಇತ್ತು ಎಂದು ಬಣ್ಣಿಸಿದರು.

ದಾವಣಗೆರೆ ವಿರಕ್ತ ಮಠದ ಡಾ.ಬಸವಪ್ರಭು ಶ್ರೀ ಮಾತನಾಡಿ, ಬಸವಣ್ಣ ಹೂವಿನಂತೆ. ಅದರ ಮಕರಂದ ಸವಿಯಲು ಶರಣರ ಸಂಕುಲವೇ ಇತ್ತು. ಅಲ್ಲದೆ, ಜೇನುಗೂಡಿನ ಮೂಲಕ ಸಮಾನತೆ, ಕಾಯಕ ಮತ್ತು ದಾಸೋಹವೆಂಬ ಸಿಹಿ ಸಿಕ್ಕಿತು. ಈ ತತ್ವಾದರ್ಶ ಜೀವನದಲ್ಲಿ ಮೈಗೂಡಿಸಿಕೊಂಡಲ್ಲಿ ಬದುಕು ಹಸನಾಗಲಿದೆ ಎಂದು ಸಲಹೆ ನೀಡಿದರು.

ಕೂಡಲ ಸಂಗಮಕ್ಕೆ ಕುಲಾತೀತವಾಗಿ ಎಲ್ಲರೂ ಬಂದರು. ಆ ರೀತಿ ಬಂದವರ ಪೈಕಿ ಕುಲಕ್ಕೆ ತಿಲಕವೆಂಬಂತೆ ಇದ್ದದ್ದು, ಮಾದಾರ ಚನ್ನಯ್ಯ ಶಿವಶರಣರು ಎಂದು ಬಣ್ಣಿಸಿದರು.

ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಶ್ರೀ ಮಾತನಾಡಿ, ಚನ್ನಯ್ಯ ಅವರ ವ್ಯಕ್ತಿತ್ವದಿಂದಾಗಿ ಬಸವಣ್ಣ ಅಪ್ಪ ಎಂದು ಕರೆಯುತ್ತಿದ್ದರು. ಶರಣ ಪರಂಪರೆಯಲ್ಲಿ ವೃತ್ತಿ-ಜಾತಿ, ಮೇಲು-ಕೀಳು ಇರಲಿಲ್ಲ. ಆದರೀಗ ಮೀಸಲಾತಿ, ಅಸ್ತಿತ್ವಕ್ಕಾಗಿ ನಡೆಯುತ್ತಿರುವ ಘಟನೆಗಳು ಎಲ್ಲರಿಗೂ ತಿಳಿದ ವಿಚಾರ ಎಂದರು.

ಬಸವಣ್ಣ ಅವರ ಲಿಂಗಾಯತ ತತ್ವ-ಸಿದ್ಧಾಂತ ಬದುಕಿನ ವಿಧಾನವಾಗಿತ್ತು. ಈ ಪರಂಪರೆಯ ಮಠಗಳು ಕಾಯಕವನ್ನು ಗೌರವಿಸುವ, ಎಲ್ಲರನ್ನೂ ಸಮಾನರಾಗಿ ಕಾಣುವ ಮೇರು ಪರ್ವತಗಳಾಗಿದ್ದವು. ಆ ನಿಟ್ಟಿನಲ್ಲಿ ಮುರುಘಾಮಠವೂ ಕಾರ್ಯನಿರ್ವಹಿಸುತ್ತ ಬಂದಿದೆ ಎಂದು ತಿಳಿಸಿದರು.

ವಿವಿಧ ಸಮಾಜಗಳ ಮುಖಂಡರಾದ ಶ್ರೀನಿವಾಸ್, ಸ್ವಾಮಿ, ತಿಪ್ಪೇಸ್ವಾಮಿ, ಉಮೇಶ್, ಬಸವರಾಜಕಟ್ಟಿ, ಎಸ್.ಎಂ.ಕೊಟ್ರೇಶಪ್ಪ, ಎಸ್.ವಿ.ರವಿಶಂಕರ್, ತಿಪ್ಪೇಸ್ವಾಮಿ, ರಾಜಶೇಖರ್, ಡಾ.ಮಮತಾ, ಡಾ.ಆನಂದ್, ನವೀನ್ ಮಸ್ಕಲ್, ಕೆ.ಎಂ.ರಮೇಶ್, ನಿಂಗಪ್ಪ, ಉಮೇಶ್ ಪತ್ತಾರ್, ವಿಜಯದೇವರು, ಲಂಕೇಶದೇವರು ಇತರರಿದ್ದರು.