ಮೈಸೂರು: ಹುಟ್ಟಿನಿಂದಲೇ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿದ್ದು, ಅಂಥವರಿಗೆ ಸಹಾಯಹಸ್ತ ಚಾಚಿದಾಗ ಮಾತ್ರ ಮಕ್ಕಳು ಹಾಗೂ ಪಾಲಕರು ನೆಮ್ಮದಿ ಜೀವನ ಕಾಣಲು ಸಾಧ್ಯ ಎಂದು ಉಡುಪಿಯ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೆ.ಜಿ. ಕೊಪ್ಪಲು ಸರ್ಕಾರಿ ಶಾಲೆ ಆವರಣದಲ್ಲಿ ರೀಬಾರ್ನ್ ಪ್ರತಿಷ್ಠಾನ ಆರಂಭಿಸಿರುವ ವಿಶೇಷ ಮಕ್ಕಳ ಆರೈಕೆ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ವಿಶೇಷ ಮಕ್ಕಳು ಎಲ್ಲರಂತೆ ಸಹಜವಾಗಿ ಬದುಕಲು ಆಗುವುದಿಲ್ಲ. ಹುಟ್ಟಿನಿಂದಲೇ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಶಿಕ್ಷಣ ನೀಡುವುದು ಸವಾಲಿನ ಕೆಲಸ. ವಿಶೇಷ ಮಕ್ಕಳಲ್ಲಿ ಕೀಳರಿಮೆ ಮೂಡದಂತೆ ಶಿಕ್ಷಣ ನೀಡಿ, ಸಾಮರ್ಥ್ಯ ಹೆಚ್ಚಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಅವರಿಗೆ ಸಹಾಯಹಸ್ತ ಚಾಚಿದಾಗ ಮಾತ್ರ ಅವರ ಪಾಲಕರಿಗೂ ನೆಮ್ಮದಿಯ ಜೀವನ ನೀಡಬಹುದು ಎಂದರು.
ಎಲ್ಲ ಮಕ್ಕಳಂತೆ ವಿಶೇಷ ಮಕ್ಕಳು ಸಾಮರ್ಥ್ಯವನ್ನು ಗಳಿಸಲು ವಿಶೇಷ ಆರೈಕೆ ಕೇಂದ್ರಗಳನ್ನು ಹೆಚ್ಚು ತೆರೆಯಬೇಕಿದೆ. ಅಂಗವಿಕಲ ಹಾಗೂ ವಿಶೇಷ ಮಕ್ಕಳ ಆರೈಕೆ ಸುಲಭವಲ್ಲ. ಪಾಲಕರಿಗೂ ವಿಶೇಷ ಆರೈಕೆಯ ಪಾಠಗಳನ್ನು ನೀಡಬೇಕಾಗುತ್ತದೆ. ಚಿಕಿತ್ಸೆ ನೀಡಬೇಕಾಗುತ್ತದೆ. ವಿಶೇಷ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕಾಗುತ್ತದೆ. ಈ ಮೂಲಕ ಅವರ ಸಾಮರ್ಥ್ಯ ಹೆಚ್ಚಿಸಬಹುದು ಎಂದರು.
ಮನುಷ್ಯ ಕೇವಲ ತನಗಾಗಿ ಬದುಕಿದರೆ ಅದು ಸ್ವಾರ್ಥ. ಇತರರಿಗಾಗಿ ಬದುಕುವ ನಿಸ್ವಾರ್ಥ ಸೇವೆಯಲ್ಲಿ ದೇವರನ್ನು ಕಾಣಬಹುದಾಗಿದೆ. ಪರೋಪಕಾರವನ್ನು ಪ್ರತಿಯೊಬ್ಬರೂ ಮಾಡಿದರೆ ಸುಖಿರಾಜ್ಯ ನಿರ್ಮಾಣವಾಗುತ್ತದೆ. ಬದುಕಿನ ಯಶಸ್ಸಿಗಾಗಿ ಆಸ್ತಿಕರು ದೇವರ ಪೂಜೆ ಮಾಡುತ್ತಾರೆ. ಆದರೆ, ಗುಡಿ-ಗೋಪುರಗಳಲ್ಲಿ ಮಾತ್ರ ಪೂಜೆ ಮಾಡಿದರೆ ಸಾಲುವುದಿಲ್ಲ. ಎಲ್ಲರ ಹೃದಯದಲ್ಲಿಯೂ ನಾನಿದ್ದೇನೆ, ಕಷ್ಟದಲ್ಲಿರುವವರಿಗೆ ನೆರವಾದರೆ ನನಗೆ ಪೂಜೆ ಸಲ್ಲಿಸಿದಂತೆ ಎಂದು ದೇವರು ಹೇಳುತ್ತಾನೆ. ಹೀಗಾಗಿ ಸೇವೆಯೇ ಭಗವಂತನ ಆರಾಧನೆ ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮನೆಯಲ್ಲಿ ದಂಪತಿ ದುಡಿಯುವ ಜವಾಬ್ದಾರಿಯನ್ನು ಹೊತ್ತಿದ್ದರೆ, ಅವರಿಗೆ ವಿಶೇಷ ಮಕ್ಕಳಿದ್ದರೆ ಆರೈಕೆ ಸರಿಯಾಗಿ ಸಿಗುವುದಿಲ್ಲ. ಥೆರಪಿ ನೀಡಿ, ಆಹಾರ ವ್ಯವಸ್ಥೆ ಮಾಡಿರುವ ರೀಬಾರ್ನ್ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು.
ನಗರದ ಲಲಿತಮಹಲ್ ಬಳಿ ವಿಶೇಷ ಮಕ್ಕಳಿಗೆ ಆರೈಕೆ ಕೇಂದ್ರವು ಮೂರು ದಶಕಗಳ ಹಿಂದೆ ಇತ್ತು. ಇದೀಗ ನಗರ ಮಧ್ಯಭಾಗದಲ್ಲಿ ಆರೈಕೆ ಕೇಂದ್ರ ಆರಂಭಿಸಿರುವುದು ಉತ್ತಮ ಕಾರ್ಯ. ಇದರಿಂದ ಇನ್ನಷ್ಟು ಮಕ್ಕಳಿಗೆ ಆರೈಕೆ ದೊರೆತಂತಾಗುತ್ತದೆ. ಶಾಸಕರ ಅನುದಾನದಿಂದ ಅಗತ್ಯ ಪರಿಕರಗಳನ್ನು ಕೇಂದ್ರಕ್ಕೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪಾ, ಪಾಲಿಕೆ ಸದಸ್ಯೆ ಎಂ.ಎಸ್.ಶೋಭಾ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು, ಸಮೂಹ ಸಂಪನ್ಮೂಲ ಕೇಂದ್ರದ ಶ್ರೀಕಂಠಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಆರ್.ಮಧುಸೂದನ, ರೀಬಾರ್ನ್ ಪ್ರತಿಷ್ಠಾನದ ರಾಕೇಶ್, ರಾಹುಲ್, ಪೂಜಾ, ವಿಜಯ್, ಯಶ್ವಂತ್ ಇತರರಿದ್ದರು.