ಮೈಸೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ರಂಗರಾವ್ ಸ್ಮಾರಕ ವಿಶೇಷ ಚೇತನರ ಶಾಲೆ (ಆರ್‌ಎಂಎಸ್‌ಡಿ)ಯ ಶಿಕ್ಷಕರನ್ನು ಗೌರವಿಸಲಾಯಿತು.
ವಿಶೇಷ ಚೇತನ ಶಾಲೆಯ ಶಿಕ್ಷಕರಿಗಾಗಿ ಇತ್ತೀಚೆಗೆ ಮೇಟಗಳ್ಳಿಯಲ್ಲಿರುವ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಅಧಿವೇಶನದಲ್ಲಿ ಹಿರಿಯ ಶಿಕ್ಷಣ ಸಲಹಾ ತಜ್ಞರಾದ ಡಾ.ಎಲ್. ಸವಿತಾ ಅವರು ಸನ್ಮಾನ ಮಾಡಿ, ಶಿಕ್ಷಣ ಎಲ್ಲರಿಗೂ ಸಮಾನ ಹಾಗೂ ಸುಲಭವಾಗಿ ತಲುಪುವಂತೆ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿಗೆ ಹೊಂದಿಕೊಂಡು ಹೋಗುವುದು ಮುಖ್ಯ ಎಂದು ಹೇಳಿದರು.
ಎನ್‌ಇಪಿಯಲ್ಲಿ ಸಮಗ್ರ ಶಿಕ್ಷಣ ಚೌಕಟ್ಟಿಗೆಒತ್ತು ನೀಡುತ್ತದ್ದು, ಇದರಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾದ ವೃತ್ತಿ ಮತ್ತು ಅವರ ಆಸಕ್ತಿ ಆಧಾರಿತ ವಿಭಾಗಗಳು ಸೇರಿರುತ್ತವೆ. ಸೃಜನಶೀಲತೆ, ಕಲಿಕೆ, ಪ್ರಯೋಗಗಳು, ದೃಶ್ಯೀಕರಣ ಮತ್ತು ಕಲೆಯನ್ನು ಶೈಕ್ಷಣಿಕ ಕ್ಷೇತ್ರಕ್ಕೆ ಅಳವಡಿಸುವುದರೊಂದಿಗೆ ಅನೇಕ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಜೀವನವನ್ನು ಅದು ಬಹಳಷ್ಟು ಪರಿವರ್ತಿಸಲಿದೆ. ವಿಶೇಷ ಚೇತನರಿಗೂ ಅವಕಾಶ ಕಲ್ಪಿಸಲಾಗಿದ್ದು, ಮುಖ್ಯವಾಹಿನಿಗೆ ತರುವ ಕಾರ್ಯ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಸಿದ್ದ ಎನ್.ಆರ್.ಪ್ರತಿಷ್ಟಾನದ ಚೇರ‌್ಮನ್ ಆರ್. ಗುರು ಮಾತನಾಡಿ, ಶಿಕ್ಷಕರು ಜಗತ್ತಿನ ಬೆಳಕಾಗಿದ್ದಾರೆ. ಕತ್ತಲಲ್ಲಿ ಅವರು ದಾರಿ ತೋರುತ್ತಾರೆ. ಬದುಕುಳಿಯಲು ನಮಗೆ ಶಕ್ತಿ ನೀಡುವ ಭರವಸೆ ಅವರಾಗಿದ್ದಾರೆ. ಪ್ರತಿ ಶಿಕ್ಷಕರು ವಿದ್ಯಾರ್ಥಿಯ ಜೀವನದಲ್ಲಿ ಸಮಗ್ರ ಪಾತ್ರ ವಹಿಸುತ್ತಾರೆ. ಈ ವಿದ್ಯಾರ್ಥಿಗಳಿಗೆ ಶಿಕ್ಷಕರೇ ಬೆಳಕಾಗಿರುತ್ತಾರೆ ಎಂದು ಹೇಳಿದರು.