ಸುಭಾಶ್‍ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ಧ ವಿಶೇಷ ಚೇತನ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟ 
ಜಿಲ್ಲೆ

ವಿಶೇಷ ಚೇತನ ಮಕ್ಕಳು ಯಶಸ್ವಿ ಕ್ರೀಡಾಪಟುಗಳು

ಚಿಕ್ಕಮಗಳೂರು: ದೇಶ-ವಿದೇಶಗಳಲ್ಲಿ ಸಾಮಾನ್ಯ ಕ್ರೀಡಾಪಟುಗಿಂತ ವಿಶೇಷ ಚೇತನ ಕ್ರೀಡಾಪಟುಗಳು ಹೆಚ್ಚಿನ ಸಾಧನೆಗೈಯುವ ಮೂಲಕ ಯಶಸ್ವಿ ಕ್ರೀಡಾಪಟುವಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಪ್ರಾಥಮಿಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಾ. ಫೈರೋಜ್ ಅಹ್ಮದ್ ತಿಳಿಸಿದರು.

ನಗರದ ಸುಭಾಶ್‍ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ಧ ವಿಶೇಷ ಚೇತನ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಬುಧವಾರ ಬಹುಮಾನ ವಿತರಿಸಿ ಮಾತನಾಡಿದರು.

ಸಾಮಾನ್ಯ ಮಕ್ಕಳಂತೆ ವಿಶೇಷ ಚೇತನ ಮಕ್ಕಳು ಕ್ರೀಡೆಯಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ಸರ್ಕಾರ 100, 50 ಮೀಟರ್ ಓಟ, ಗುಂಡುಎಸೆತ, ಜಾವಲಿನ್ ಥ್ರೋ ಹಾಗೂ ಉದ್ದಜಿಗಿತ ಕ್ರೀಡೆಗಳನ್ನು ಆಯೋಜಿಸಿ ವಿಶೇಷ ಚೇತನ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುತ್ತಿದೆ ಎಂದು ಹೇಳಿದರು.

ಚಿಕ್ಕಮಗಳೂರಿನ ಆಶಾಕಿರಣ ಶಾಲೆಯ ಅನೇಕ ಮಕ್ಕಳು ವಿದೇಶದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಹೀಗಾಗಿ ವಿಶೇಷ ಚೇತನ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗದೇ ಮುಕ್ತವಾಗಿ ಕ್ರೀಡಾಚಟುವಟಿಕೆಯಲ್ಲಿ ಭಾಗವಹಿಸಿದರೆ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಲು ಸಾಧ್ಯ ಎಂದರು.

ಇಂದಿನ ಕ್ರೀಡಾಕೂಟದಲ್ಲಿ ನಾಲ್ಕು ವಿಭಾಗಗಳಲ್ಲಿ ಕ್ರೀಡಾಕೂಟ ಆಯೋಜಿಸಿದ್ದು ಸಂಪೂರ್ಣ ಅಂಧತ್ವ, ಭಾಗಶಃ ಅಂಧತ್ವ, ಒಂದು ಕೈ ನೂನ್ಯತೆ ಅಥವಾ ಕಾಲಿನ ನೂನ್ಯತೆ ಹೊಂದಿದವರಿಗೆ ಶಿಕ್ಷಕರು ತರಬೇತಿ ನೀಡಿ ಕ್ರೀಡೆಯಲ್ಲಿ ಭಾಗವಹಿಸಲು ಸಹಕಾರಿಯಾಗಿದ್ದಾರೆ. ಮಕ್ಕಳು ಅತ್ಯಂತ ಸಂತೋಷದಿಂದ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನಿರ್ದೇಶಕರ ಕಚೇರಿಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಯು.ವಿ.ಪಾಲಾಕ್ಷಮೂರ್ತಿ, ಜಿಲ್ಲೆಯ ಸುಮಾರು 15ಕ್ಕೂ ಹೆಚ್ಚು ಶಾಲೆಗಳಿಂದ 150ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಾವರು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಯಟ್ ಉಪನ್ಯಾಸಕ ಬಿ.ಎಂ.ಜ್ಞಾನಮೂರ್ತಿ, ಗ್ರೇಡ್1 ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಂಕರೇಗೌಡ, ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕರಾದ ಜಯದೇವಪ್ಪ, ವೇದಮೂರ್ತಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಖಜಾಂಚಿ ಮಂಜುನಾಥ್, ಅಜ್ಜಂಪುರ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಪರಮೇಶ್, ಗ್ರೇಡ್2 ಪ್ರಾಥಮಿಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ವಸಂತ್‍ಕುಮಾರ್ ಮತ್ತಿತರರಿದ್ದರು.