ಧಾರವಾಡ: ಮಕ್ಕಳಲ್ಲಿ ಪರಿಸರದ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಇಕೋ ವಾಚ್ ಕರ್ನಾಟಕ, ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ, ಬಾಲ ಬಳಗ ಸೃಜಶೀಲ ಶಿಕ್ಷಣ ಪ್ರತಿಷ್ಠಾನ, ರೋಟರಿ ಕ್ಲಬ್ ಬೇಲೂರ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಆಶ್ರಯದಲ್ಲಿ ಆ. 28ರಂದು ಬೆಳಗ್ಗೆ 10 ಗಂಟೆಯಿಂದ ಮಕ್ಕಳ ನಡಿಗೆ ಹಸಿರಿನ ಕಡೆಗೆ ವಿಶೇಷ ಜಾಗೃತಿ ಕಾರ್ಯಾಗಾರವನ್ನು ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಲಾಗಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾರ್ಯಾಗಾರ ಉದ್ಘಾಟಿಸುವರು. ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆಗಮಿಸುವರು. ಇಕೋ ವಾಚ್ ಕರ್ನಾಟಕದ ಸುರೇಶ ಹೆಬ್ಳೀಕರ ಅಧ್ಯಕ್ಷತೆ ವಹಿಸುವರು.
ಕಾರ್ಯಾಗಾರದಲ್ಲಿ ಜಿಲ್ಲೆಯ 500 ಮಕ್ಕಳು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್‌ನ 100 ಮಕ್ಕಳು ಭಾಗವಹಿಸುವರು. ಇಡೀ ದಿನ ಮಕ್ಕಳಿಗೆ ಬೀಜ ಬಿತ್ತುವ, ಸಸಿ ನಾಟಿ ಮಾಡುವ ಪದ್ಧತಿ ಕಲಿಸಲಾಗುವುದು. ಇದಲ್ಲದೆ ಪರಿಸರದ ಬಗ್ಗೆ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಪರಿಸರ ತಜ್ಞರು ವಿವಿಧ ವಿಷಯಗಳ ಕುರಿತು ಕಿರುಚಿತ್ರಗಳ ಮೂಲಕ ಮಾಹಿತಿ ನೀಡಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.