ದಾವಣಗೆರೆ: ಐಎಂಎ ಹೂಡಿಕೆ ಸಂಸ್ಥೆಯ ಬಹುಕೋಟಿ ಹಗರಣದ ತನಿಖೆಗೆ ವಿಶೇಷ ಅಧಿಕಾರಿ ನೇಮಿಸಬೇಕೆಂದು ಬಿಜೆಪಿಯ ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಎಸ್. ಅಬ್ದುಲ್ ಮಜೀದ್ ಆಗ್ರಹಿಸಿದರು.
ಪ್ರಕರಣದ ತನಿಖೆಯನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರಿಗೆ ನೇಮಿಸಲಾಗಿದೆ. ಆದರೆ ಅವರಿಗೆ 2-3 ಇಲಾಖೆಯ ಕಾರ್ಯಭಾರ ನೀಡಿರುವುದರಿಂದ ಕಷ್ಟವಾಗಲಿದೆ. ಹೀಗಾಗಿ ಪ್ರತ್ಯೇ ಐಎಎಸ್ ಅಧಿಕಾರಿ ನೇಮಿಸಿ, ವಂಚನೆಗೊಳಗಾದ ಹೂಡಿಕೆದಾರರಿಗೆ ತ್ವರಿತ ಪರಿಹಾರ ಒದಗಿಸಬೇಕೆಂದು ಬಿಜೆಪಿಯ ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಎಸ್. ಅಬ್ದುಲ್ ಮಜೀದ್ ಆಗ್ರಹಿಸಿದರು.
ಐಎಂಎ ಹೂಡಿಕೆ ಸಂಸ್ಥೆಯಡಿ 5 ಸಾವಿರ ಕೋಟಿ ರೂ. ವಂಚನೆಯಾಗಿತ್ತು. ಇದರಡಿ ಮುಟ್ಟುಗೋಲು ಹಾಕಿಕೊಳ್ಳಲಾದ ವಂಚಕರ ಆಸ್ತಿ ಮಾರಾಟ ಮಾಡಿ, ಎಲ್ಲ ಹೂಡಿಕೆದಾರರ ಖಾತೆಗಳಿಗೆ ಹಣ ಜಮೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಈ ಹಿಂದೆ ಸರ್ಕಾರ ನೇಮಿಸಿದ್ದ ಐಎಎಸ್ ಅಧಿಕಾರಿ ಹರ್ಷಾ ಗುಪ್ತ, ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದರಿಂದಾಗಿ ಸುಮಾರು 5 ಸಾವಿರ ಕುಟುಂಬಗಳಿಗೆ 50 ಸಾವಿರ ರೂ.ವರೆಗೆ ಹಣ ಖಾತೆಗೆ ಜಮೆಯಾಗಿದೆ. ಅದಕ್ಕೂ ಹೆಚ್ಚು ಹಣ ತೊಡಗಿಸಿದವರಿಗೂ ಹಣ ವಾಪಸಾತಿಗೆ ಸರ್ಕಾರ ಕ್ರಮ ವಹಿಸಬೇಕು.
ಐಎಂಎ ವಂಚನೆ ಬಗ್ಗೆ ತನಿಖೆ ನಡೆಸಿ, ವಂಚನೆ ರೂವಾರಿ ಮನ್ಸೂರ್ ಅಲಿಯನ್ನು ಬಂಧಿಸಿದ ಶ್ರೇಯಸ್ಸು ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲ ಬಾರಿಗೆ ಸಾಮಾನ್ಯ ಕಾರ್ಯಕರ್ತನಾಗಿ ಬರೆದ ಪತ್ರಕ್ಕೆ ಸ್ಪಂದಿಸಿ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನೆಯಾಗಿ ತನಿಖೆ ಚುರುಕಾಗಿತ್ತು. ಆದರೆ ಈ ಪ್ರಕರಣ ಭೇದಿಸಿದ ವಿಚಾರದಲ್ಲಿ ವಿಪಕ್ಷದವರು ದುರ್ಲಾಭ ಪಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಹೂಡಿಕೆದಾರರಾದ ತನ್ವೀರ್ ಅಹ್ಮದ್, ಜಬೀವುಲ್ಲಾ, ಶಂಷುದ್ದೀನ್, ಸೈಯದ್ ಗೌಸ್ ಇದ್ದರು.
--